ಏ.13ರಂದು ವಿವಿಧೆಡೆ ಮತದಾರರ ಜಾಗೃತಿ ಕಾರ್ಯಕ್ರಮ

ಮಂಡ್ಯ.ಏ.12:- ಮಂಡ್ಯ ಜಿಲ್ಲೆಯಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾರರಿಗೆ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರಂದು ತಪ್ಪದೇ ಮತದಾನ ಮಾಡುವ ಬಗ್ಗೆ ಹಾಗೂ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ಏಪ್ರಿಲ್ 13 ರಂದು ಆಯೋಜಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯ ಸ್ವೀಪ್ ಐಕಾನ್ ಖ್ಯಾತ ಚಲನಚಿತ್ರ ನಟ ನೀನಸಂ ಸತೀಶ್ ಅವರನ್ನು ಏಪ್ರಿಲ್ 13 ರಂದು ಆಹ್ವಾನಿಸಿ ಗೌರವಿಸಲಾಗುವುದು. ಮಂಡ್ಯ ವಿಶ್ವವಿದ್ಯಾಲಯ ಕಾಲೇಜು ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿ, ಪೆÇ?ಸ್ಟರ್ ಸ್ಪರ್ಧೆ ವಿಜೇತ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸುವರು ಎಂದರು.
ಕಾಲೇಜು ವಿದ್ಯಾರ್ಥಿಗಳಿಗೆ ಮತದಾನ ಮಾಡಲು ಉತ್ತೇಜಿಸುವ ದೃಷ್ಟಿಯಿಂದ 6 ಸೆಲ್ಫಿ ಪಾಯಿಂಟ್ ಗಳನ್ನು ಇಡಲಾಗುವುದು. ಈ ಸೆಲ್ಫಿ ಪಾಯಿಂಟ್‍ಗಳಲ್ಲಿ ಮತದಾನ ಜಾಗೃತಿ ವಾಕ್ಯಗಳನ್ನು ರಚಿಸುವಂತೆ ತಿಳಿಸಿದರು.
ಸಹಿ ಅಭಿಯಾನ: ಮತದಾನ ಜಾಗೃತಿ ಕುರಿತಂತೆ ನೀನಸಂ ಸತೀಶ್, ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಸಹಿ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೆ ಉತ್ತಮವಾದ ಸ್ಥಳ ಗುರುತಿಸಿ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಮಾದರಿ ಮತಗಟ್ಟೆ: ಕಡಿಮೆ ಮತದಾನವಾಗಿರುವ ನಗರದ ಮತಗಟ್ಟೆ ಗುರುತಿಸಿ ಮಾದರಿ ಮತಗಟ್ಟೆ ಮಾಡಿ ಮಾದರಿ ಮತಗಟ್ಟೆಯಲ್ಲಿ ವಿಕಲಚೇತನರಿಗೆ ಮತದಾನ ಮಾಡಿರುವ ವ್ಯವಸ್ಥೆಗಳ ಬಗ್ಗೆ ಅರಿವು ಮೂಡಿಸಬೇಕು. ಈ ಸ್ಥಳದಲ್ಲಿ ಜಾಗೃತಿ ಜಾಥ ಕೂಡ ಹಮ್ಮಿಕೊಳ್ಳುವಂತೆ ತಿಳಿಸಿದರು.
ವಿಡಿಯೋ ತುಣುಕು: ಮೊದಲ ಬಾರಿಗೆ ಮತದಾನ ಮಾಡುವ ಯುವಕರಿಂದ 30 ಸೆಕೆಂಡ್‍ಗಳ ಮತದಾನದ ಮಹತ್ವ ಕುರಿತು ವಿಡಿಯೋ ತುಣುಕುಗಳನ್ನು ಸಿದ್ಧಪಡಿಸಿ ಅವುಗಳಲ್ಲಿ ಉತ್ತಮವಾದ ವಿಡಿಯೋ ತುಣಕನ್ನು ಜಾಗೃತಿಗೆ ಉಪಯೋಗಿಸಿ ಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಂ.ಬಾಬು, ಮಂಡ್ಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ನಾಗರಾಜು ಜಿ.ಚೋಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಮೇಶ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಧನಂಜಯ, ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಹೆಚ್ ಎಸ್ ನಿರ್ಮಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.