
ಅಫಜಲಪುರ: ಎ.5:ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸನ್ನು ಕಟ್ಟಿಕೊಂಡು ಏ. 13ರಂದು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ಅಂದಿನ ದಿನ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಶಿವಕುಮಾರ ನಾಟೀಕಾರ ತಿಳಿಸಿದರು.
ಸುದ್ದಿಗೋಷ್ಟಿ ನಡೆಸಿದ ಅವರು, ಮೇ 10ರಂದು ನಡೆಯಲಿರುವ ಸಾರ್ವತ್ರಿಕ ವಿಧಾನಸಭೆಯ ಚುನಾವಣೆ ಅಂಗವಾಗಿ ಈಗಾಗಲೇ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಮಾಡಿದ್ದೇವೆ. ಕಳೆದ 13 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದೇನೆ. ಆದರೆ 40 ವರ್ಷಗಳಿಂದ ಈ ಮತಕ್ಷೇತ್ರವು ಯಾವುದೇ ಅಭಿವೃದ್ಧಿಯಾಗದೆ ಸಾಕಷ್ಟು ಹಿಂದುಳಿದಿದೆ.
ಹೀಗಾಗಿ ಈ ಬಾರಿ ಅಫಜಲಪುರ ಮತಕ್ಷೇತ್ರದ ಮತದಾರರು ಹೊಸ ಮುಖಕ್ಕೆ ಅವಕಾಶ ನೀಡಬೇಕೆಂದು ತೀರ್ಮಾನಿಸಿದ್ದಾರೆ.
ಈಗಾಗಲೇ ಮತಕ್ಷೇತ್ರದ 120 ಹಳ್ಳಿಗಳಿಗೆ 47 ದಿನಗಳ ಕಾಲ ಪಾದಯಾತ್ರೆಯ ಮೂಲಕ ಪಕ್ಷ ಸಂಘಟನೆ ಹಾಗೂ ಜನರ ಸಮಸ್ಯೆಗಳನ್ನು ಆಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹೀಗಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಮೇಲೆ ಭರವಸೆ ಇಟ್ಟು ಟಿಕೆಟ್ ನೀಡಿದ್ದಾರೆ. ಹೀಗಾಗಿ ಎಪ್ರಿಲ್ 13ರಂದು ಪಟ್ಟಣದ ಬಸವೇಶ್ವರ ವೃತ್ತದಿಂದ ನ್ಯಾಷನಲ್ ಫಂಕ್ಷನ್ ಹಾಲ್ ವರೆಗೆ ಬೃಹತ್ ರಾಲಿ ಮೂಲಕ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಮುಗಿದ ನಂತರ ತಹಶೀಲ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು. ಸಾರ್ವತ್ರಿಕ ಚುನಾವಣೆಯ ಮೊದಲನೆಯ ನಾಮಪತ್ರ ನಮ್ಮದಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಜಮೀಲ್ ಗೌಂಡಿ, ಶಂಕರಗೌಡ ಪಾಟೀಲ್, ಮಲ್ಲಿಕಾರ್ಜುನ ಸಿಂಗೆ, ಅಮರಸಿಂಗ್ ರಜಪೂತ್, ಅಮೂಲ್ ಮೊರೆ, ಸಿದ್ದಣ್ಣಗೌಡ ಮಾಲಿಪಾಟೀಲ್, ಭೀಮರಾಯ ಶಹಾಪುರ ಉಪಸ್ಥಿತರಿದ್ದರು.