ಏ. 11 ರಿಂದ 14ರವರೆಗೆ ಲಸಿಕೆ ಉತ್ಸವಕ್ಕೆ ಮೋದಿ ಕರೆ: ಪರೀಕ್ಷೆ ಹೆಚ್ಚಳಕ್ಕೆ ಸೂಚನೆ

ನವದೆಹಲಿ, ಏ 8-ದೇಶದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 11ರಿಂದ 14ರವರೆಗೆ ದೇಶದಲ್ಲಿ ವ್ಯಾಕ್ಸಿನ್ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಹೆಚ್ಚಿನ ಜನರಿಗೆ ಲಸಿಕೆ ಹಾಕಿಸಬೇಕು, 45ವರ್ಷಕ್ಕೂ ಮೇಲ್ಪಟ್ಟವರಿಗೆ ತ್ವರಿತಗತಿಯಲ್ಲಿ ವ್ಯವಸ್ಥೆ ಮಾಡಬೇಕಾಗಿದೆ ಎಂದು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ವಿಡಿಯೋ ಸಂವಾದದ ಸಭೆ ಬಳಿಕ ಪ್ತಧಾನಿ ನರೇಂದ್ರ ಮೋದಿ ಮಾತನಾಡಿದರು.

ಕೋವಿಡ್-19 ಪರೀಕ್ಷೆ ಜತೆಗೆ ಶೇ.70 ರಷ್ಟು ಆರ್ ಟಿ- ಪಿಸಿಆರ್ ಪರೀಕ್ಷೆ ಮಾಡಬೇಕಾಗಿದೆ. ಪರೀಕ್ಷೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿದಾಗ ಪಾಸಿಟಿವ್ ಪ್ರಕರಣಗಳು

ಅಧಿಕ ಸಂಖ್ಯೆಯಲ್ಲಿ ಬರುತ್ತವೆ. ಸೂಕ್ತ ಮಾದರಿಗಳ ಸಂಗ್ರಹ ಅತ್ಯಂತ ಪ್ರಮುಖವಾಗಿದೆ. ಸೂಕ್ತ ಆಡಳಿತದ ಮೂಲಕ ಇದನ್ನು ಪರಿಶೀಲಿಸಬೇಕಾಗಿದೆ ಎಂದರು.

ಕೊರೋನಾ ತಡೆಗೆ ಯುದ್ದೋಪಾದಿ ಕಾರ್ಯ ಅತ್ಯಗತ್ಯವಾಗಿದೆ. ಸೋಂಕು ನಿಯಂತ್ರಣಕ್ಕೆ ಜನರ ಸಹಭಾಗಿತ್ವ ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ಸೋಂಕು ಪತ್ತೆ, ಪರೀಕ್ಷೆ ಹಾಗೂ ಉಪಚಾರ ಅನಿವಾರ್ಯವಾಗಿದೆ.ದೇಶದಲ್ಲಿ ಮೊದಲನೇ ಅಲೆ ಮುಗಿದಿದ್ದು, ಪಾಸಿಟಿವ್ ಸೋಂಕು ಹೆಚ್ಚಳವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಮೋದಿ,ಪಾಸಿಟಿವ್ ದರವನ್ನು ಶೇಕಡಾ 5ಕ್ಕಿಂತ ಕಡಿಮೆ ಮಾಡಬೇಕಾಗಿದೆ. ಲಸಿಕೆ ನೀಡಿಕೆ ಅಭಿಯಾನವನ್ನು ಚುರುಕುಗೊಳಿಸಬೇಕಾಗಿದೆ.ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಇದಕ್ಕಾಗಿ ಸರ್ವ ಪಕ್ಷ ಸಭೆ ನಡೆಸಿ ಸರ್ಕಾರ ಒಮ್ಮತದ ಅಭಿಪ್ರಾಯಗಳನ್ನು ಸಂಗ್ರಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಪ್ರದೇಶಗಳಲ್ಲಿ ‘ಕೊರೊನಾ ಕರ್ಫ್ಯೂ’ ಎಂಬ ಪದವನ್ನು ಬಳಸುವಂತೆ ಪ್ರಧಾನಿ ಆಗ್ರಹಿಸಿದ್ದಾರೆ. ರಾತ್ರಿ ಕರ್ಫ್ಯೂ ಸಮಯವನ್ನು ರಾತ್ರಿ 9 ಅಥವಾ 10 ಗಂಟೆಯಿಂದ ಬೆಳಿಗ್ಗೆ 5 ಅಥವಾ 6 ಗಂಟೆಯ ವರೆಗೂ ನಿಗದಿ ಮಾಡುವುದು ಉತ್ತಮ ಎಂದು ಅವರು ಸಲಹೆ ಮಾಡಿದ್ದಾರೆ.

ಮಾಸ್ಕ್‌ ಧರಿಸುವುದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿಯನ್ನು ಇನ್ನಷ್ಟು ಹೆಚ್ಚಿಸಬೇಕಾದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದ ಅವರು, ಕೋವಿಡ್‌–19 ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.