ಏ. 10 ರಂದು ಅಫಜಲಪುರಕ್ಕೆ ಜನಾರ್ಧನ ರೆಡ್ಡಿಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಆರ್.ಡಿ. ಪಾಟೀಲ್ ಸ್ಪರ್ಧೆ

ಅಫಜಲಪುರ:ಎ.4: ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಬಂದಿರುವ ನಮ್ಮ ಕುಟುಂಬದಿಂದ ಈ ಬಾರಿ ನನ್ನ ಸಹೋದರ ಆರ್.ಡಿ.ಪಾಟೀಲ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ಮುಖಂಡ ಮಹಾಂತೇಶ್ ಪಾಟೀಲ್ ತಿಳಿಸಿದರು.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಲಾಗಿತ್ತು. ಆದರೆ ನಮ್ಮ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಹಿತೈಷಿಗಳ ಸಲಹೆಯ ಮೇರೆಗೆ ಜನಾರ್ಧನ ರೆಡ್ಡಿ ಅವರು ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಈ ಬಾರಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಈಗಾಗಲೇ ಹಳ್ಳಿ ಹಳ್ಳಿಗೆ ತೆರಳಿ ಅಫಜಲಪುರ ಅಭಿವೃದ್ಧಿಗಾಗಿ ಒಂದು ಬಾರಿ ನನ್ನ ಸಹೋದರ ಆರ್.ಡಿ.ಪಾಟೀಲ್ ಅವರಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡುತ್ತಿದ್ದೇವೆ. ಮತಕ್ಷೇತ್ರದ ಜನರು ಸಹ ಹೊಸ ಮುಖದ ಅವಶ್ಯಕತೆ ಇದೆ ಎಂದು ಹೇಳುತ್ತಿದ್ದಾರೆ.

ಆದ್ದರಿಂದ ಎಪ್ರಿಲ್ 10ರಂದು ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಸಮಾವೇಶಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಜನಾರ್ಧನ್ ರೆಡ್ಡಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಮುಖಂಡ ಬಸವರಾಜ ಪಾಟೀಲ್ ಅಳ್ಳಗಿ ಮಾತನಾಡಿ, ಅಫಜಲಪುರ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಹೀಗಾಗಿ ಈ ಬಾರಿ ಜನರ ಕಣ್ಣೀರು ಒರೆಸುವ ನಾಯಕರಾಗಿರುವ ಆರ್.ಡಿ.ಪಾಟೀಲ್ ಅವರಿಗೆ ಗೆಲ್ಲಿಸಬೇಕೆಂದು ಈಗಾಗಲೇ ಕ್ಷೇತ್ರದ ಮತದಾರರು ತೀರ್ಮಾನ ಮಾಡಿದ್ದಾರೆ. ಈ ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಲಾಗಿತ್ತು.ಆದರೆ ಯಾವುದಾದರೂ ಒಂದು ಪಕ್ಷದ ಸಿದ್ಧಾಂತ ಹಾಗೂ ಚಿಹ್ನೆಯ ಮೇಲೆ ಚುನಾವಣೆ ನಿಲ್ಲಬೇಕೆಂಬ ಜನರ ಒತ್ತಾಸೆಯಿಂದಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ಹೀಗಾಗಿ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕುರುಬ ಸಮಾಜದ ಮುಖಂಡ ಲಕ್ಷ್ಮಿಪುತ್ರ ಜಮಾದಾರ, ಬಸವಂತ್ರಾಯ ಪಾಟೀಲ್, ಹೀರು ರಾಠೋಡ್, ಸತೀಶ್ ಹವಳಗಾ ಉಪಸ್ಥಿತರಿದ್ದರು.