ಬೆಂಗಳೂರು, ಏ ೬- ರಾಜ್ಯದ ಹಲವೆಡೆ ಶುರುವಾದ ಪೂರ್ವ ಮುಂಗಾರು ಮಳೆ ಏಪ್ರಿಲ್ ೧೦ರವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಮಿಂಚು ಜೋರು ಮಳೆ ದಾಖಲಾಗಿದೆ. ಇದೇ ರೀತಿ ಮುಂದಿನ ಐದು ದಿನವು ಬರಲಿದೆ. ಐದು ದಿನಗಳ ಪೈಕಿ ಏಪ್ರಿಲ್ ೮ರವರೆಗೆ ಕರಾವಳಿ ಭಾಗದಲ್ಲಿ ಮಳೆ ತುಸು ಬಿರುಸುಗೊಳ್ಳಲಿದೆ. ಇದನ್ನು ಬಿಟ್ಟರೆ ದಕ್ಷಿಣ ಒಳನಾಡಿನ ಭಾಗದಲ್ಲಿ ಹಗುರ ಇಲ್ಲವೇ ಸಾಧಾರಣವಾಗಿ ಮಳೆಯಾಗುವ ನಿರೀಕ್ಷೆಯಿದೆ.
ಆದರೆ ಉತ್ತರ ಒಳನಾಡಿನ ಭಾಗದ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ತುಂತುರು ಮಳೆ ಬರುವ ಸಾಧ್ಯತೆ ಇದೆ. ಇನ್ನೂ ಏಪ್ರಿಲ್ ೮ ರಂದು ಕರ್ನಾಟಕ ರಾಜ್ಯದ ಬಹತೇಕ ಎಲ್ಲ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಂಭವ ಇದೆ ಎಂದು ಮುನ್ಸೂಚನೆ ನೀಡಿದೆ.
ಏಪ್ರಿಲ್ ೮ ರಂದು ಮಳೆ ಸುರಿಸುವ ಮಾರುತಗಳು ಹೆಚ್ಚು ಚುರುಕಾಗಿರಲಿವೆ. ಹೀಗಾಗಿ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ, ಉತ್ತರ ಒಳನಾಡಿನ ಜಿಲ್ಲೆಗಳಾದ ವಿಜಯಪುರ, ಕಲಬುರಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಡಗು, ಕೋಲಾರ, ಮೈಸೂರು, ರಾಮನಗರ ಜಿಲ್ಲೆಗಳ ಹಲವು ಕಡೆಗಳಲ್ಲಿ ಗುಡುಗು ಸಹಿತ ಅಧಿಕ ಮಳೆ ಬೀಳಲಿದೆ.
ನಂತರದ ಎರಡು ದಿನ ಏಪ್ರಿಲ್ ೧೦ರವರೆಗೆ ಮಳೆ ತುಸು ಕ್ಷೀಣಿಸಲಿದೆ. ಕರಾವಳಿ ಸೇರಿದಂತೆ ಮೂರು ಭಾಗದ ಒಂದೆರಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ತುಂತುರು ಇಲ್ಲವೇ ಹಗುರವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮುಂದಿನ ಎರಡರಿಂದ ಮೂರು ದಿನವು ಜೋರು ಮಳೆ ನಿರೀಕ್ಷೆ ಇದೆ. ಸಂಜೆ ನಂತರ ಬಿಸಿಲು ಕಣ್ಮರೆಯಾಗಿ ದಿಢೀರ್ ಮೋಡ ಕವಿದು ಮಳೆ ಸುರಿಯುವ ಲಕ್ಷಣಗಳು ಇವೆ. ಏಪ್ರಿಲ್ ೭ರವರೆಗೆ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.