ಏ.10ರಂದು ಮಹಾರತೋತ್ಸವ, ಸರ್ವಧರ್ಮ ಸಾಮೂಹಿಕ ವಿವಾಹ

ಸಂಜೆವಾಣಿ ವಾರ್ತೆ
ಕುರುಗೋಡು:ಮಾ.9

ದುಂದು ವೆಚ್ಚದ ಮದುವೆಗಳು ಪ್ರಸ್ತುತ ಪ್ರತಿಷ್ಠೆಯಾಗಿ ಪರಿಣಮಿಸಿವೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಹೀಗಾಗಿ ಸರಳ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹಗಳಿಗೆ ಉತ್ತೇಜನ ನೀಡಬೇಕಾಗಿದೆ ಎಂದು ಸುಕ್ಷೇತ್ರ ಸೋಮಲಾಪುರ ಗ್ರಾಮದ ಮಠ ಸೇರಿದಂತೆ ಪಂಚ ಮಠಾಧೀಶರಾದ ಶ್ರೀ ಸದ್ಗುರು ಷಡಕ್ಷರಿ ಸ್ವಾಮಿ ಅವಧೂತರು ಹೇಳಿದರು.

ಪಟ್ಟಣ ಸಮೀಪದ ಸುಕ್ಷೇತ್ರ ಸೋಮಲಾಪುರ ಗ್ರಾಮದ ಆರಾಧ್ಯ ದೈವ ಶ್ರೀ ಸದ್ಗುರು ಚಿದಾನಂದ ಸ್ವಾಮಿ ಅವಧೂತರ 31ನೇ ವರ್ಷದ ಪುಣ್ಯರಾಧನೆ ಪ್ರಯುಕ್ತ ಏ.10 ರಂದು ಸಂಜೆ ಜರುಗಳಲಿರುವ ಮಹಾರಥೋತ್ಸವ ಮತ್ತು ಅಂದು ಬೆಳಿಗ್ಗೆ ಸರ್ವಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳು ತಿಳಿಸಿದರು.

ಆರ್ಥಿಕ ಸಂಕಷ್ಟದ ಕಾರಣ ಅನೇಕ ಮದುವೆಗಳು ನಿಂತುಹೋಗಿವೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಮದುವೆಗೆ ನೆರವಾಗುವುದು ಸರ್ವಧರ್ಮ ಸಾಮೂಹಿಕ ವಿವಾಹದ ಉದ್ದೇಶವಾಗಿದೆ ಎಂದು ಹೇಳಿದರು.

ಶ್ರೀ ಸದ್ಗುರು ಷಡಕ್ಷರಿ ಸ್ವಾಮಿ ಅವಧೂತರ ಸಾನ್ನಿಧ್ಯದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಜರುಗಲಿದೆ. ವಧು-ವರರಿಗೆ ಬಟ್ಟೆ ಬರೆ, ಚಿನ್ನದ ತಾಳಿ, ಕಾಲುಂಗುರ, ಭಾಸಿಂಗ, ಪೇಟ ಸೇರಿದಂತೆ ಮದುವೆಗೆ ಅಗತ್ಯವಾದ ಎಲ್ಲ ಸಾಮಗ್ರಿಗಳನ್ನು ಕೊಡಲಾಗುವುದು ಎಂದು ತಿಳಿಸಿದರು.

ಆಸಕ್ತರು ಜನನ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಸೋಮಲಾಪುರ ಗ್ರಾಮದ ಶ್ರೀ ಚಿದಾನಂದ ಮಠಕ್ಕೆ ಆಗಮಿಸಿ ಮಾ.31ರ ಒಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9900365453, 9980084404, 7259243562 ಮತ್ತು 9731252621 ಸಂಪರ್ಕಿಸಬಹುದು ಎಂದರು.