ಏ. 1 ರಿಂದ ಪ್ರದೇಶವಾರು ಆಸ್ತಿ ತೆರಿಗೆ ದರ ನಿಗದಿ: ಪಿ.ಸುನಿಲ್ ಕುಮಾರ್

ವಿಜಯಪುರ, ಮಾ.30-ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ ದರವನ್ನು 2021- 22ನೇ ಸಾಲಿನ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಭವನದಲ್ಲಿ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು ಮತ್ತು ಆಯುಕ್ತರನ್ನು ಒಳಗೊಂಡು ಇತ್ತೀಚಿಗೆ ನಡೆದ ಸಭೆಯಲ್ಲಿ ಮಾತನಾಡಿ, ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಕಲಂ 109ರ ತಿದ್ದುಪಡಿ ಪ್ರಕಾರ ಸ್ವತ್ತಿನ ಮೂಲ ಮೌಲ್ಯವನ್ನು ಕರ್ನಾಟಕ ಸ್ಟ್ಯಾಂಪುಗಳ ಅಧಿನಿಯಮ 1957 ರ ಸೆಕ್ಷ ನ್ 45ಬಿ ರಡಿಯಲ್ಲಿ ಪ್ರಕಟಿಸಲಾದ ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಯ ಶೇ 25ನ್ನು ಪರಿಗಣಿಸಲಾಗಿ ಬೇರೆ ಬೇರೆ ಪ್ರದೇಶಗಳಿಗೆ ಬೇರೆ ಬೇರೆ ಆಸ್ತಿ ತೆರಿಗೆ ದರಗಳನ್ನು ನಿಗದಿಪಡಿಸಲಾಗಿದೆ ಎಂದು ಅವರು ಸೂಚಿಸಿದರು.
ಕರ್ನಾಟಕ ಪೌರ ನಿಗಮ ಅಧಿನಿಯಮ 1976 ರ ಕಲಂ 108 ಉಪ ಪ್ರಕರಣ 2 (ಬಿ) ರ ತಿದ್ದುಪಡಿ ಪ್ರಕಾರ ವಾಸದ ಕಟ್ಟಡಗಳಿಗೆ ಮಾರುಕಟ್ಟೆ ಮೂಲ ಬೆಲೆಯ ಮೇಲೆ ಕನಿಷ್ಠ ಶೇ 0.2 ಕ್ಕಿಂತ ಕಡಿಮೆ ಇಲ್ಲದಂತೆ ಮತ್ತು ಶೇ 1.5 ಕ್ಕಿಂತ ಹೆಚ್ಚಿಗೆ ಇಲ್ಲದಂತೆ ಪ್ರದೇಶವಾರು ಬೇರೆ ಬೇರೆ ತೆರಿಗೆ ದರಗಳನ್ನು ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಕರ್ನಾಟಕ ಪೌರ ನಿಗಮ ಅಧಿನಿಯಮ 1976 ರ ಕಲಂ 108 ಉಪ ಪ್ರಕರಣ 2(ಸಿ) ರ ತಿದ್ದುಪಡಿ ಪ್ರಕಾರ ಖಾಲಿ ನಿವೇಶನಗಳಿಗೆ ಕನಿಷ್ಠ ಶೇಕಡ 0.2 ಗಿಂತ ಕಡಿಮೆ ಇಲ್ಲದಂತೆ ಮತ್ತು 0.5 ಕ್ಕಿಂತ ಹೆಚ್ಚಿಗೆ ಇಲ್ಲದಂತೆ ಪ್ರದೇಶವಾರು ಬೇರೆ ಬೇರೆ ತೆರಿಗೆ ದರಗಳನ್ನು ವಿಧಿಸಲಾಗುತ್ತದೆ. ಮತ್ತು ಪ್ರಕರಣ 108 ಉಪ ಪ್ರಕರಣ(3) ರ ತಿದ್ದುಪಡಿ ಪ್ರಕಾರ ಕಟ್ಟಡಕ್ಕೆ ಹೊಂದಿಕೊಂಡಿರುವ 1000 ಚ. ಅಡಿಗಿಂತ ಹೆಚ್ಚಿರುವ ಖಾಲಿಭೂಮಿಗೆ ಸ್ವತ್ತು ತೆರಿಗೆಯನ್ನು ಖಾಲಿ ಭೂಮಿಗೆ ವಿಧಿಸುವ ಆಸ್ತಿ ತೆರಿಗೆ ದರದಲ್ಲಿ ವಿಧಿಸಲಾಗುತ್ತದೆ ಎಂದು ಅವರು ಸೂಚಿಸಿದರು.
ಕರ್ನಾಟಕ ಪೌರ ನಿಯಮಗಳ ಅಧಿನಿಯಮ 1976 ರ ಕಲಂ 108ರ ಉಪ ಪ್ರಕರಣ 2 (ಎ) ತಿದ್ದುಪಡಿ ಪ್ರಕಾರ ವಾಣಿಜ್ಯ ಕಟ್ಟಡಗಳಿಗೆ ಮಾರುಕಟ್ಟೆ ಮೂಲ ಬೆಲೆಯ ಕನಿಷ್ಠ ಶೇಕಡ 0.5 ಕ್ಕಿಂತ ಕಡಿಮೆ ಇಲ್ಲದಂತೆ ಮತ್ತು ಶೇಕಡ 3.0 ಕ್ಕಿಂತ ಹೆಚ್ಚಿಗೆ ಇಲ್ಲದಂತೆ ಪ್ರದೇಶವಾರು ಬೇರೆ ಬೇರೆ ತೆರಿಗೆ ದರವನ್ನು ವಿಧಿಸಿ, ಕರ್ನಾಟಕ ಪೌರ ನಿಯಮಗಳ ಅಧಿನಿಯಮ 1976 ರ ಪ್ರಕರಣ 109 ಎ ರ ತಿದ್ದುಪಡಿ ಪ್ರಕಾರ ಪ್ರತಿವರ್ಷ ಶೇ 3 ರಿಂದ 5ರಷ್ಟು ಸ್ವತ್ತು ತೆರಿಗೆಯನ್ನು ಹೆಚ್ಚಿಸಲು ಅವಕಾಶವಿರುತ್ತದೆ ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಾನಗರಪಾಲಿಕೆಗೆ ಸಂಬಂಧಿಸಿದಂತೆ 2005 ರಿಂದ 2021ಕ್ಕೆ ಆಸ್ತಿ ತೆರಿಗೆ ದರವನ್ನು ಪರಿಷ್ಕರಣೆ ಮಾಡಲಾಗಿರುತ್ತದೆ. ಆದರೆ, ಕರ್ನಾಟಕ ಪೌರ ನಿಗಮ ಅಧಿನಿಯಮ 1976 ರ ಪ್ರಕರಣ 108, 109 ಮತ್ತು 109 ಎ ಗಳಿಗೆ ತಿದ್ದುಪಡಿ ಮಾಡಿ ಫೆಬ್ರುವರಿ 18 ರಂದು ರಾಜ್ಯಪತ್ರ ಹೊರಡಿಸಲಾಗಿದ್ದು, ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಪ್ರಕರಣ 109 (ಎ) ಪ್ರಕರಣ ಸನ್ 2005-06ನೇ ಹಣಕಾಸು ವರ್ಷದಿಂದ ಪ್ರಾರಂಭಿಸಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆಯನ್ನು ಶೇಕಡಾ 15 ರಿಂದ 30ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಅವಕಾಶ ವಿರುತ್ತದೆ ಎಂದು ಅವರು ಸೂಚಿಸಿದರು.
ವಾರ್ಡ ವಾರು ಮತ್ತು ಪ್ರದೇಶವಾರು ಆಸ್ತಿ ತೆರಿಗೆ ದರಗಳನ್ನು ನಿಗಧಿ ಪಡಿಸಿ ಠರಾವು ಮಾಡಿದ ಪ್ರಕಾರ 2021-22 ನೇ ಸಾಲಿನ ಅನ್ವಯವಾಗುವಂತೆ ಏಪ್ರಿಲ್ 1 ರಿಂದ ಜಾರಿಗೆ ಬರುತ್ತದೆ. ಸಾರ್ವಜನಿಕರು ವಾರ್ಡವಾರು ಮತ್ತು ಪ್ರದೇಶವಾರು ಆಸ್ತಿ ತೆರಿಗೆ ದರಗಳ ಮಾಹಿತಿಯನ್ನು ಕಂದಾಯ ವಿಭಾಗದಲ್ಲಿ ಪಡೆಯಬೇಕೆಂದು ಸೂಚಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.