ಏ. 1 ಮೂರ್ಖರ ದಿನವಲ್ಲ ಆರ್‌ಬಿಐ ಸ್ಥಾಪಿಸಿದ ದಿನ: ನಿಧಿಕುಮಾರ್

ತುಮಕೂರು, ಏ. ೩- ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಪ್ರಾಬ್ಲಂ ಆಫ್ ರೂಪಿ ಸಂಶೋಧನಾ ಕೃತಿ ಆಧಾರದ ಮೇಲೆ ೧೯೩೫ ಏ.೧ ರಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಲಾಗಿದ್ದು, ಏ..೧ ನ್ನು ಮೂರ್ಖರ ದಿನ ಆಚರಣೆ ಹೆಸರಲ್ಲಿ ಭಾರತದ ಇತಿಹಾಸದಲ್ಲಿ ಮಹತ್ವದ ದಿನವನ್ನು ಮರೆ ಮಾಚಲಾಗಿದೆ ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಅರ್ಥಶಾಸ್ತ್ರದ ಪಿತಾಮಹರಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದಲ್ಲಿ ರೂಪಾಯಿ ಮತ್ತು ಅದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಂಡಿಸಿದ ಸುದೀರ್ಘ ಸಂಶೋಧನಾ ವರದಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದು, ಅದರ ಆಧಾರದ ಮೇಲೆ ದಿ ರಾಯಲ್ ಕಮಿಷನ್ ಆಫ್ ಇಂಡಿಯನ್ ಕರೆನ್ಸಿ ಅಂಡ್ ಫೈನಾನ್ಸ್ ಆಯೋಗ ೧೯೩೫ ಏ.೧ ರಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಿದೆ ಎಂದರು.
ಅಂಬೇಡ್ಕರ್ ಅವರು ಭಾರತದ ಅರ್ಥ ವ್ಯವಸ್ಥೆಗೆ ನೀಡಿರುವ ಕೊಡುಗೆಯ ಆಧಾರದ ಮೇಲೆ ರಚಿತವಾಗಿರುವ ಆರ್‌ಬಿಐ ಏ. ೧ ರಂದು ಸ್ಥಾಪನೆಯಾದ್ದರಿಂದ ಭಾರತ ಸರ್ಕಾರದ ಹಣಕಾಸು ವರ್ಷ ಏಪ್ರಿಲ್‌ನಿಂದಲೇ ಪ್ರಾರಂಭವಾಗುತ್ತದೆ. ಇಂತಹ ಮಹತ್ವದ ದಿನವಾದ ಏ.೧ ನ್ನು ಮೂರ್ಖರ ದಿನದ ಹೆಸರಿನಲ್ಲಿ ಮರೆ ಮಾಚಲಾಗಿದೆ. ಇಂತಹ ಮಹತ್ವದ ದಿನದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ನಗರ ಅಧ್ಯಕ್ಷ ಟಿ. ಮನು ಮಾತನಾಡಿ, ಅಂಬೇಡ್ಕರ್ ಅವರು ನೀಡಿದ ಯೋಜನೆ ಮತ್ತು ಸುಧಾರಣಾ ಸಲಹೆ ಆಧಾರದ ಮೇಲೆ ಭಾರತದ ಅರ್ಥ ವ್ಯವಸ್ಥೆ ನಿರ್ಮಾಣವಾಗಿದೆ. ಭಾರತದ ಅರ್ಥ ವ್ಯವಸ್ಥೆಯನ್ನು ಬಲಶಾಲಿಯನ್ನಾಗಿ ರೂಪಿಸಿದ ಅಂಬೇಡ್ಕರ್ ಅವರನ್ನು ಸ್ಮರಿಸಬೇಕಿರುವುದು ಭಾರತೀಯರೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ನವ್ಯ ಭಾರತದ ಪ್ರಗತಿಯಲ್ಲಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಯಶಸ್ವಿಗೆ ಕಾರಣವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹತ್ತರವಾದ ಪ್ರಾಬ್ಲಂ ಆಫ್ ರೂಪಿ ಕುರಿತು ಯುವ ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಿದೆ. ಅರ್ಥ ವ್ಯವಸ್ಥೆಯಲ್ಲಿ ಹಣದ ಮಹತ್ವವನ್ನು ತಿಳಿಸಿದ ಅವರು, ಏ. ೧ ನ್ನು ಮೂರ್ಖರ ದಿನವನ್ನಾಗಿ ಆಚರಿಸುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಯುವ ಘಟಕದ ಜಿಲ್ಲಾಧ್ಯಕ್ಷ ಕೆ. ಗೋವಿಂದರಾಜು, ಜಿಲ್ಲಾ ಉಪಾಧ್ಯಕ್ಷ ಸಿದ್ಧಲಿಂಗಯ್ಯ, ಜಿ.ಸಿ., ಜಿಲ್ಲಾ ಗೌರವಾಧ್ಯಕ್ಷ ರಾಜ್ ಎ.ಎಸ್., ಪ್ರಧಾನ ಕಾರ್ಯದರ್ಶಿ ಜಿ.ಆರ್.ಸುರೇಶ್, ಜಿಲ್ಲಾ ಕಾರ್ಯದರ್ಶಿ ಶಿವರಾಜು, ತಾಲ್ಲೂಕು ಯುವ ಘಟಕದ ಅಧ್ಯಕ್ಷ ತ್ಯಾಗರಾಜು, ಸಿದ್ಧರಾಜು.ಕೆ.ಜಿ, ಮೋಹನ್‌ಕುಮಾರ್.ಟಿ.ಕೆ, ರಂಗಶಾಮಯ್ಯ, ಹೆಚ್.ಬಿ.ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.