ಏ.೮ ರ ಬಳಿಕ ಬಿಜೆಪಿ ಪಟ್ಟಿ ಬಿಡುಗಡೆ

ಹುಬ್ಬಳ್ಳಿ, ಏ ೬: ಬಿಜೆಪಿ ಕೋರ್ ಕಮೀಟಿ ಸಭೆ ನಿನ್ನೆಯಷ್ಟೇ ಮುಗಿದಿದ್ದು ಇದೇ ದಿ. ೮ ರಂದು ಮತ್ತೊಮ್ಮೆ ಸಭೆ ನಡೆಸಿ ನಂತರ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ವಿಷಯದಲ್ಲಿ ನಾವು ಶ್ರದ್ಧೆ, ನಿಷ್ಠೆಯಿಂದ ನೊಂದ ದೀನ ದಲಿತ ಹಿಂದುಳಿದ ವರ್ಗದ ಸಮುದಾಯಕ್ಕೆ ಶಾಶ್ವತವಾಗಿ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ ಎಂದು ನುಡಿದರು.
ನಾವು ಮಾಡಲಾಗದ್ದನ್ನು ಇವರು ಮಾಡಿದರಲ್ಲ ಎಂಬ ಅಪರಾಧಿ ಭಾವ ಕಾಂಗ್ರೆಸ್‌ನವರನ್ನು ಕಾಡುತ್ತಿದೆ. ನಾವು ರಾಜಕೀಯ ಇಚ್ಛಾಶಕ್ತಿ ಮೆರೆದರೆ ಕಾಂಗ್ರೆಸ್‌ನದ್ದು ಢೋಂಗಿತನ ಎಂದು ಕಟಕಿಯಾಡಿದರು.
ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿಯವರಿಗೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿರುವ ಕುರಿತಾದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತ, ಅದು ಕಾಂಗ್ರೆಸ್‌ನ ನಿರ್ಣಯವಾಗಿದೆ. ಮಿಕ್ಕಿದ್ದೆಲ್ಲ ಕಾನೂನಾತ್ಮಕ ವಿಚಾರವಾಗಿದ್ದು ನ್ಯಾಯಾಲಯದಲ್ಲಿದೆ. ಆದ್ದರಿಂದ ಈ ಕುರಿತು ತಾವು ಹೆಚ್ಚಿನ ಟಿಪ್ಪಣಿ ಮಾಡಲಾಗದು ಎಂದು ತಿಳಿಸಿದರು.
ಕಾಂಗ್ರೆಸ್‌ನವರ ಈ ತರಹದ ನಿರ್ಣಯಗಳನ್ನು ಜನರೇ ತೀರ್ಮಾನ ಮಾಡಬೇಕು ಎಂದು ಹೇಳಿದರು.
ಸ್ಟಾರ್ ನಟರ ಪ್ರಚಾರ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ನಟ ಪವನ್ ಕಲ್ಯಾಣ್ ಪ್ರಚಾರಕ್ಕೆ ಆಗಮಿಸುವ ವಿಷಯ ತಮಗೆ ಗೊತ್ತಿಲ್ಲ. ಅವರು ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿ ಆಗಿದ್ದಾರೆ, ಕಾಯ್ದು ನೋಡಿ ಎಂದಷ್ಟೇ ಬೊಮ್ಮಾಯಿ ಹೇಳಿದರು.
ತಾವು ಸದ್ಯ ಶಿಗ್ಗಾವಿ ಕ್ಷೇತ್ರದಿಂದಲೇ ಸ್ಪರ್ಧೆಗೆ ಇಳಿಯಲಿದ್ದು ಈ ಕುರಿತಾದ ಯಾವ ಊಹಾಪೋಹಗಳಿಗೂ ಕಿವಿಗೊಡಬೇಡಿ ಎಂದು ಅವರು ಸ್ಪಷ್ಟವಾಗಿ ತಿಳಿಸಿದರು.