ಏ.೩: ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ

ಲಿಂಗಸುಗೂರು.ಏ.೦೨-ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏಪ್ರಿಲ್ ೩ ಎಂದು ರಾಯಚೂರು ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನ ಹಾಗೂ ತಾಲೂಕ ಮಹಿಳಾ ಘಟಕದ ಪದಗ್ರಹಣ, ಐದು ಕೃತಿಗಳ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾಪದ ಪರಿಷತ್ ತಾಲೂಕು ಅಧ್ಯಕ್ಷ ಮಹೇಂದ್ರ ಕುರ್ಡಿ ಹೇಳಿದರು.
ಗುರುವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಗೆ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ಧೇಶದಿಂದ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಮತ್ತು ತಾಲೂಕು ಘಟಕ, ಮಹಿಳಾ ಘಟಕಗಳ ಸಹಯೋಗದಲ್ಲಿ ಪ್ರಥಮ ಬಾರಿಗೆ ಸಮ್ಮೇಳನ ಆಯೋಜಿಸಲಾಗಿದೆ.
ಎ.೩ ರಂದು ಬೆಳಗ್ಗೆ ಹಟ್ಟಿ ಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ರಾಷ್ಟ್ರ ಧ್ವಜಾರೋಹಣ ಮತ್ತು ಎಸಿ ರಾಜಶೇಖರ ಡಂಬಳ ಪರಿಷತ್ ಧ್ವಜಾರೋಹಣ ನೆರವೇರಿಸುವರು. ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ ೧೦ ಗಂಟೆಗೆ ಸಜ್ಜಲಶ್ರೀ ವೇದಿಯಲ್ಲಿ ನಡೆಯುವ ಸಮ್ಮೇಳನವನ್ನು ಹಾವೇರಿ ಜಾನಪದ ವಿವಿ ಕುಲಪತಿ ಡಾ.ಡಿ.ಬಿ.ನಾಯಕ ಉದ್ಘಾಟಿಸುವರು. ಶಾಸಕ ಡಿ.ಎಸ್.ಹೂಲಗೇರಿ ಅಧ್ಯಕ್ಷತೆವಹಿಸುವರು. ಸಂಸದ ರಾಜಾ ಅಮರೇಶ್ವರ ನಾಯಕ ಕಲಾಮೇಳ ಉದ್ಘಾಟಿಸಲಿದ್ದಾರೆ. ಜಾನಪದ ಕಲಾವಿದ ಚಿತ್ರನಟ ಗುರುರಾಜ ಹೊಸಕೋಟೆ ಆಗಮಿಸಲಿದ್ದಾರೆ.
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಡಾ.ಲಿಂಗಣ್ಣ ಗಾಣದಾಳ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ಮೊದಲ ಹೆಜ್ಜೆ, ಸಾಹಿತ್ಯ ಮತ್ತು ಚಳುವಳಿ, ವೈಶಾಖ ಪೂರ್ಣಿಮೆ ಗಜಲ್‌ಗಳು, ಪತ್ರಿಕಾ ತಲೆ ಬರಹ, ನವರಸ ಕಥೆಗಳು ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಮಧ್ಯಾಹ್ನ ೧ ಗಂಟೆಗೆ ಕಲಾ ಪ್ರದರ್ಶನ, ೨ ಗಂಟೆಗೆ ಜಾನಪದ ಸಾಹಿತ್ಯ ಗೋಷ್ಠಿ, ಕರುನಾಡ ರಕ್ಷಣಾ ಸಮಿತಿಯಿಂದ ಜಾನಪದ ನೃತ್ಯ, ಸಂಜೆ ೪ ಗಂಟೆಗೆ ಜಾನಪದ ಕಲೆಗಳ ಝೇಂಕಾರ ಕಾರ್ಯಕ್ರಮದಲ್ಲಿ ಬಯಲಾಟ, ಬುರ್ರಾ ಕಥ, ಸೋಬಾನೆ ಹಾಡು, ತತ್ವಪದ, ಕೋಲಾಟ, ಅಂತಿ ಹಾಡು, ಕಂಸಾಳೆ ಕಲೆಗಳ ಪ್ರದರ್ಶನ ಜರುಗಲಿವೆ. ಸಂಜೆ ೫-೩೦ ಗಂಟೆಗೆ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದ್ದು, ಸಾಧಕರು, ಕಲಾವಿದರು ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ತಿಳಿಸಿದರು.
ಜಾನಪದ ಪರಿಷತ್ ತಾಲೂಕ ಪ್ರಧಾನ ಕಾರ್ಯದರ್ಶಿ ಶಿವಾನಂದ ನರಹಟ್ಟಿ, ಸಹಕಾರ್ಯದರ್ಶಿ ರಮೇಶ ನಾಯಕ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ ನಡುವಿನಮನಿ, ಗೌರವಾಧ್ಯಕ್ಷೆ ಶಿವಮ್ಮ ಪಟ್ಟದಕಲ್ ಉಪಸ್ಥಿತರಿದ್ದರು.