ಏ. ೨೦ ರಾಜ್ಯದಲ್ಲಿ ಮೋದಿ ಪ್ರಚಾರ

ಬೆಂಗಳೂರು, ಏ. ೧೭- ಕಳೆದ ಭಾನುವಾರವಷ್ಟೇ ರಾಜ್ಯಕ್ಕೆ ಆಗಮಿಸಿ ಮೈಸೂರು ಹಾಗೂ ಬೆಂಗಳೂರಿನಲ್ಲಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ ಮೋದಿ ಅವರು ಮತ್ತೆ ಏ. ೨೦ ರಂದು ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.
ಪ್ರಧಾನಿ ಮೋದಿ ಅವರು ಇದೇ ತಿಂಗಳ ೨೦ ರಂದು ರಾಜ್ಯಕ್ಕೆ ಆಗಮಿಸಲಿದ್ದು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು.
ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಪ್ರಧಾನಿ ಮೋದಿ ಅವರು ಸಹ ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಸಕ್ರಿಯರಾಗಿದ್ದು, ಏ. ೨೦ ರಂದು ಅವರು ಚಿಕ್ಕಬಳ್ಳಾಪುರದಲ್ಲಿ ಸಂಜೆ ೪ ಗಂಟೆಗೆ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು, ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಪರವಾಗಿ ಮತಭೇಟೆ ನಡೆಸುವರು.
ಚಿಕ್ಕಬಳ್ಳಾಪುರ ಸಮಾವೇಶದ ನಂತರ ಬೆಂಗಳೂರಿಗೆ ಬರುವ ಪ್ರಧಾನಿ ಮೋದಿ ಅವರು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಜೆ ೬ ಗಂಟೆಗೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವರು.
ಕಳೆದ ಭಾನುವಾರ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಜೆಡಿಎಸ್ ಸರ್ವೋಚ್ಛ ನಾಯಕ, ಮಾಜಿ ಪ್ರಧಾನಿ ದೇವೇಗೌಡರ ಜತೆಗೂಡಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿದ್ದರು. ನಂತರ ಅದೇ ದಿನ ಮಂಗಳೂರಿನಲ್ಲಿ ರೋಡ್ ಶೋ ಸಹ ನಡೆಸಿದ್ದರು.
ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಜತೆ ಜಂಟಿ ಪ್ರಚಾರ ನಡೆಸಿದ್ದು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನ ಸಮಾವೇಶದಲ್ಲಿ ಪ್ರಧಾನಿ ಸಭೆಯಲ್ಲಿ ಭಾಗಿಯಾಗುವರು.