ಅರಕೇರಾ,ಮಾ.೩೦- ಎನ್‌ಆರ್‌ಬಿಸಿ ನಾಲೆಗೆ ಏ.೨೦ ರವರೆಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮನಗೌಡ ಮಂಗಳವಾರ ಒತ್ತಾಯಿಸಿದರು.
ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.೩೦ ರವರೆಗೆ ನೀರು ಹರಿಸಲು ಎನ್‌ಆರ್‌ಬಿಸಿ ಸಲಹಾ ಸಮಿತಿ ನಿರ್ಧರಿಸಿದ್ದು, ಅವೈಜ್ಞಾನಿಕ ತೀರ್ಮಾನವಾಗಿದೆ. ರೈತರು ಬೆಳೆದ ಬೆಳೆಗಳು ಉತ್ತಮ ಫಸಲು ಕೈಗೆ ಸೇರುವ ಸಮಯದಲ್ಲಿ ಸಲಹಾ ಸಮಿತಿ ನಿರ್ಣಯ ಸರಿಯಿಲ್ಲ. ನಾಲೆ ವ್ಯಾಪ್ತಿಯ ರೈತರು ಈಗಾಗಲೇ ಭತ್ತ, ಹತ್ತಿ, ಮೆಣಸಿನಕಾಯಿ, ಸಜ್ಜೆ, ಶೇಂಗಾ ಸೇರಿ ವಿವಿಧ ಬೆಳೆಗಳನ್ನು ಬೆಳೆದಿದ್ದು, ನಾಲೆಗೆ ನೀರು ಬಂದ್ ಆದಲ್ಲಿ, ಕೊನೆಯ ಹಂತದಲ್ಲಿರುವ ಬೆಳೆಗಳು ಕೈ ಸೇರುವುದಿಲ್ಲ. ಇದರಿಂದ ರೈತರು ಕಂಗಾಲಾಗುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ.
ಆದ್ದರಿಂದ ಏ.೨೦ ರವರೆಗೆ ವಾರಬಂಧಿ ಅನುಸರಿಸುವ ಮೂಲಕ ಎನ್‌ಆರ್‌ಬಿಸಿ ನಾಲೆಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು. ರೈತರಿಗೆ ಸಮರ್ಪಕ ನೀರು ದೊರೆಯದೆ ಇದ್ದಲ್ಲಿ ನೀರಾವರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.