ಏ.೨೦ವರೆಗೆ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರಸ್ತೆತಡೆ

ನಾಲ್ಕು ಗಂಟೆ ಸಂಚಾರ ಬಂದ್ ಪ್ರಯಾಣಿಕರು ಪರದಾಟ
ದೇವದುರ್ಗ.ಮಾ.೩೦-ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಏ.೨೦ವರೆಗೆ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ ಬಣದ ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆ ಮುಖಂಡರೊಂದಿಗೆ ಸಿರವಾರ ಕ್ರಾಸ್ ಹತ್ತಿರದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪಾದಯಾತ್ರೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಉದ್ದೇಶಿಸಿ ರೂಪಾಶ್ರೀನಿವಾಸ ನಾಯಕ ಮಾತನಾಡಿ, ಭತ್ತ, ಮೆಣಿಸಿನಕಾಯಿ, ಸೇಂಗಾ, ಸಜ್ಜೆ ಸೇರಿ ಇತರೆ ಬೆಳೆಗಳು ನೀರಿನ ಅಭಾವದಿಂದ ಬಾಡುತ್ತಿವೆ. ನೀರಾವರಿ ಸಲಹಾ ಸಮಿತಿ ಅಧಿಕಾರಿಗಳು ರೈತರ ಬೆಳೆಗಳಿಗೆ ಏ.೨೦ವರೆಗೆ ಕಾಲುವೆಗಳಿಗೆ ನೀರು ಬಿಡಬೇಕು.
ನೀರು ನಂಬಿ ಲಕ್ಷಾಂತರ ರೂ. ವೆಚ್ಚ ಮಾಡಿಕೊಂಡು ವಿವಿಧ ಬೆಳೆಗಳು ಬೆಳೆಯಲಾಗಿದೆ. ರೈತರ ಕಣ್ಣೀರು ವರಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ನರಸಣ್ಣ ನಾಯಕ ಜಾಲಹಳ್ಳಿ ಮಾತನಾಡಿ, ಚುನಾವಣೆ ಬಂದಾಗ ರೈತರ ಮೇಲೆ ಕಾಳಜಿ ಬರುವಂತ ಸರಕಾರಗಳು ಬಡರೈತರನ್ನು ದಿವಾಳಿ ಎಬ್ಬಿಸುತ್ತಿದ್ದಾರೆ ಎಂದು ದೂರಿದರು. ಸಂಕಷ್ಟದಲ್ಲಿ ಬಿತ್ತನೆ ಮಾಡಿದಂತ ರೈತರ ಸಮಸ್ಯೆ ಕೇಳುವ ಜನಪತ್ರಿನಿಧಿಗಳು ಮಾಯವಾಗಿದ್ದಾರೆ. ಕೊನೆ ಭಾಗದ ರೈತರು ಪ್ರತಿವರ್ಷ ಸಮರ್ಪಕವಾಗಿ ನೀರು ಬಾರದೇ ನಷ್ಟದಲ್ಲೇ ಬದುಕು ಸಾಗಿಸಬೇಕಾಗಿದೆ ಎಂದರು. ಅತಿವೃಷ್ಟಿ ಅನಾವೃಷ್ಟಿ ಬೆಳೆ ಹಾನಿ, ನೆರೆ ಹಾವಳಿ ಒಂದಿಲ್ಲೊಂದು ಸಮಸ್ಯೆ ಮಧ್ಯೆ ಬಡರೈತರು ನಷ್ಟದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿಷಾಧಿಸಿದರು. ಗಿರಿಯಪ್ಪ ಪೂಜಾರಿ, ಶಬ್ಬೀರ ಜಾಲಹಳ್ಳಿ, ಹನುಮಂತ ಮನ್ನಾಪುರಿ ಸೇರಿ ಇತರೆ ಮುಖಂಡರು ಮಾತನಾಡಿದರು.
ಸಂಚಾರ ಅಸ್ತವ್ಯಸ್ಥ: ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರೈತ ಮತ್ತು ಪ್ರಗತಿಪರ ಸಂಘಟನೆಗಳು ಏ.೨೦ವರೆಗೆ ಕಾಲುವೆಗಳಿಗೆ ನೀರು ಹರಿಸುವಂತೆ ರಸ್ತೆ ತಡೆ ಪ್ರತಿಭಟನೆಯಿಂದ ನಾಲ್ಕು ತಾಸು ಸಂಚಾರ ಸ್ಥಗಿತವಾದರಿಂದ ನೂರಾರು ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು. ನೆತ್ತಿ ಸುಡುವ ಬಿಸಿಲ್ಲಿನಲ್ಲಿ ಕಾದು ಕಾದು ಬೇಸತ್ತರು. ರಸ್ತೆ ತಡೆ ಪ್ರತಿಭಟನೆಯಿಂದ ನೂರಾರು ಜನರು ನೀರಿಗಾಗಿ ಅಲೆದಾಟ ನಡೆಸಿದರು. ರಸ್ತೆಯೊದ್ದಕ್ಕೂ ಎಲ್ಲೆಂದರಲ್ಲಿ ಬಸ್, ಖಾಸಗಿ ವಾಹನಗಳು ನಿಂತಿದ್ದವು. ಇದೇ ಸಂದರ್ಭದಲ್ಲಿ ಯಲ್ಲನಗೌಡ, ಮರಿಲಿಂಗ ಗೌರಂಪೇಟೆ, ಶಿವಶಂಕರಗೌಡ, ಜಹಿರುಪಾಷ್, ವಿಶ್ವನಾಥ, ಹೈದರಾಲಿ, ರಮೇಶ ರಾಮನಾಳ ಸೇರಿ ಇತರೆ ಮುಖಂಡರು ಇದ್ದರು.