ಏ.೨೦ರವರೆಗೆ ನಾಲೆಗೆ ನೀರು ಹರಿಸಲು ಒತ್ತಾಯ

ದೇವದುರ್ಗ,ಮಾ.೨೮- ನಾರಾಯಣಪುರ ಬಲದಂಡೆ ನಾಲೆಗೆ ಏ.೨೦ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಜಾಲಹಳ್ಳಿಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.
ಎನ್‌ಆರ್‌ಬಿ ನಾಲೆ ನೀರು ನಂಬಿಕೊಂಡು ತಾಲೂಕಿನ ಸಾವಿರಾರು ರೈತರು ಲಕ್ಷಾಂತರ ಹೆಕ್ಟೇರ್‌ನಲ್ಲಿ ವಿವಿಧ ಬೆಳೆ ಬಿತ್ತನೆ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ.೩೧ರವರೆಗೆ ಹೆಚ್ಚುವರಿ ೧೦ದಿನ ನೀರು ಹರಿಸುವ ತೀರ್ಮಾನ ಕೈಗೊಂಡಿದೆ. ಆದರೆ, ಮಾ.೩೧ರವರೆಗೆ ನೀರು ಹರಿಸಿದರೆ ರೈತರ ಬೆಳೆಗಳು ಕೈಸೇರುವುದು ಅನುಮಾನ.
ಸದ್ಯ ನಾಟಿ ಮಾಡಿದ ಭತ್ತ ಸಮೃದ್ಧವಾಗಿ ಬೆಳೆದಿವೆ. ಮೆಣಸಿನಕಾಯಿ, ಹತ್ತಿ, ಹೈಬ್ರಿಡ್ ಜೋಳ, ಸಜ್ಜೆ ಸೇರಿ ವಿವಿಧ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿವೆ. ಏ.೨೦ರವರೆಗೆ ನೀರು ಹರಿಸಿದರೆ ಮಾತ್ರ ಬೆಳೆಗಳು ಕೈಗೆ ಸಿಗಲಿವೆ. ಅರ್ಧದಲ್ಲಿ ನೀರು ಬಂದ್ ಮಾಡಿದರೆ, ಬೆಳೆನಷ್ಟವಾಗಿ ಲಕ್ಷಾಂತರ ರೂ. ನಷ್ಟವಾಗಲಿದೆ ಎಂದು ದೂರಿದರು.
ಕೂಡಲೇ ಎನ್‌ಆರ್‌ಬಿ ನಾಲೆಗೆ ಏ.೨೦ರವರೆಗೆ ಸಮರ್ಪಕವಾಗಿ ನೀರು ಹರಿಸಬೇಕು. ಕೊನೇ ಭಾಗಕ್ಕೂ ನೀರು ಸಮರ್ಪಕವಾಗಿ ತಲುಪುವಂತೆ ಗೇಜ್ ಕಾಪಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ನರಸಣ್ಣ ನಾಯಕ, ಹನುಮಂತ ಮಂಡಲಗುಡ್ಡ, ಬಸವರಾಜ ನರಗಲ್, ಗಿರಿಯಪ್ಪ ಪೂಜಾರಿ ಇತರರಿದ್ದರು.