ಏ.೧೬ ಈಶಾನ್ಯ ರಾಜ್ಯಗಳಲ್ಲಿ ಪ್ರೀಯಾಂಕ ಮತಬೇಟೆ

ತ್ರಿಪುರಾ,ಏ.೧೩- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ತ್ರಿಪುರಾದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುವ ಒಂದು ದಿನ ಮುಂಚಿತವಾಗಿ ಏಪ್ರಿಲ್ ೧೬ ರಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಜನಮನ ಗೆಲ್ಲಲು ಕಸರತ್ತು ನಡೆಸಲಿದ್ದಾರೆ

ಏಪ್ರಿಲ್ ೧೬ ರಂದು ತ್ರಿಪುರಾದ ಅಗರ್ತಲಾದ ಸ್ವಾಮಿ ವಿವೇಕಾನಂದ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ್‍ಯಾಲಿ ನಡೆಯಲಿದ್ದು ಅದಕ್ಕೂ ಮುನ್ನ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದು ಈಶಾನ್ಯ ರಾಜ್ಯಗಳಲ್ಲಿ ಮಿಂಚಿನ ಸಂಚಾರಕ್ಕೆ ಸಜ್ಜಾಗಿದ್ದಾರೆ

ಹಿರಿಯ ಕಾಂಗ್ರೆಸ್ ನಾಯಕ ಸಿಪಿಐಎಂ ಬೆಂಬಲಿತ ಇಂಡಿಯಾ ಬ್ಲಾಕ್ ಅಭ್ಯರ್ಥಿ ಆಶಿಶ್ ಕುಮಾರ್ ಸಹಾ ಅವರನ್ನು ಬೆಂಬಲಿಸಲು ನಗರದ ಬಹುತೇಕ ಕಡೆ ಬೃಹತ್ ರೋಡ್‌ಶೋ ನಡೆಸಲಿದ್ದಾರೆ ಸಹಾ ಅವರು ಕಾಂಗ್ರೆಸ್ ಪಕ್ಷದ ತ್ರಿಪುರಾ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದಾರೆ.

ಪ್ರಿಯಾಂಕಗಾಂಧಿ ಅವರ ಚುನಾವಣಾ ಪ್ರಚಾರದ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್, “ಅವರು ಮಧ್ಯಾಹ್ನ ೨.೫೦ ಕ್ಕೆ ಅಗರ್ತಲಾದ ಎಂಬಿಬಿ ವಿಮಾನ ನಿಲ್ದಾಣದಲ್ಲಿ ಇಲ್ಲಿಗೆ ಬಂದಿಳಿಯಲಿದ್ದಾರೆ. ಅವರು ರೋಡ್ ಶೋ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ

ಕರ್ನಲ್ ಚೌಮುಹಾನಿ, ಪ್ಯಾರಡೈಸ್ ಚೌಮುಹಾನಿ, ಇತರ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪರ ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಜೊತೆಗೆ ಸಿಪಿಐಎಂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ

ತ್ರಿಪುರಾದಲ್ಲಿ ಲೋಕಸಭೆಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ತ್ರಿಪುರಾ ಕ್ಷೇತ್ರಕ್ಕೆ ಏಪ್ರಿಲ್ ೧೯ ರಂದು ಮತದಾನ ನಡೆಯಲಿದ್ದು, ಪೂರ್ವ ತ್ರಿಪುರದಲ್ಲಿ ಏಪ್ರಿಲ್ ೨೬ ರಂದು ಮತದಾನ ನಡೆಯಲಿದೆ. ಜೂನ್ ೪ ರಂದು ಮತ ಎಣಿಕೆ ನಡೆಯಲಿದೆ.