ಏ.೧೦ ರವರೆಗೆ ನಾಲೆಗೆ ನೀರು ಹರಿಸಿ

ದೇವದುರ್ಗ.ಮಾ.೨೭-ನಾರಾಯಣಪುರ ಬಲದಂಡೆ ನಾಲೆ ನೀರು ನಂಬಿಕೊಂಡು ರೈತರು ಭತ್ತ, ಮೆಣಸಿನಕಾಯಿ ಬೆಳೆದಿದ್ದು, ಬೆಳೆಗಳ ರಕ್ಷಣೆಗೆ ಏ.೧೦ರವರೆಗೆ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ನಾರಾಯಣಪುರದಲ್ಲಿ ಎಇಇ ರಾಮನಗೌಡ ಹಳ್ಳೂರುಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಸಲ್ಲಿಸಿತು.
ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅವೈಜ್ಞಾನಿಕವಾಗಿ ನೀರು ಬಿಡುವ ತೀರ್ಮಾನ ಕೈಗೊಂಡಿದೆ.
ಇದರಿಂದ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ಲಕ್ಷಾಂತರ ಹೆಕ್ಟೇರ್ ಭೂಪ್ರದೇಶದಲ್ಲಿ ಬೆಳೆದ ಬೆಳೆಗಳು ನೀರಿಲ್ಲದೆ ಒಣಗುವ ಸ್ಥಿತಿ ಎದುರಾಗಲಿದೆ. ಭತ್ತ, ಹತ್ತಿ, ಜೋಳ, ಸಜ್ಜೆ, ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಸಮೃದ್ಧವಾಗಿ ಬೆಳೆದಿದ್ದು, ಅವುಗಳಿಗೆ ಏ.೧೦ರವರೆಗೆ ನೀರಿನ ಅವಶ್ಯವಿದೆ.
ಏ.೧೦ರವರೆಗೆ ನಾಲೆಗೆ ನೀರು ಹರಿಸುವಂತೆ ರೈತ ಸಂಘ ಹಲವು ಸಲ ಮನವಿ ಸಲ್ಲಿಸಿದರೂ ಅಧಿಕಾರಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ. ಮಾ.೩೧ರವರೆಗೆ ನೀರು ಹರಿಸುವುದಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಆದರೆ, ಕೇವಲ ಹತ್ತು ದಿನ ಹೆಚ್ಚುವರಿ ನೀರು ಸಾಲುವುದಿಲ್ಲ ಎಂದು ದೂರಿದರು.
ಕೂಡಲೇ ರೈತರು ಬೆಳೆದ ಬೇಸಿಗೆ ಬೆಳೆ ಭತ್ತ ಸೇರಿ ವಿವಿಧ ಬೆಳೆಗಳ ರಕ್ಷಣೆಗಾಗಿ ಏ.೧೦ರವರೆಗೆ ನೀರು ಹರಿಸಿ ಅನುಕೂಲ ಕಲ್ಪಿಸಬೇಕು. ನಿರ್ಲಕ್ಷ್ಯ ಮಾಡಿದರೆ, ಲಕ್ಷಾಂತರ ರೈತರು ಬೆಳೆನಷ್ಟದಿಂದ ಸಾಲ ಹೊರುವ ದುಃಸ್ಥಿತಿ ಎದುರಾಗಲಿದೆ ಎಂದು ತಿಳಿಸಿದ್ದಾರೆ. ತಾಲೂಕು ಅಧ್ಯಕ್ಷ ಬೂದಯ್ಯಸ್ವಾಮಿ ಗಬ್ಬೂರು, ಪ್ರಭಾಕರ್ ಪಾಟೀಲ್ ಇಂಗಳದಾಳ, ರಾಮನಗೌಡ ಗಣೇಕಲ್, ರಂಗಪ್ಪ ನಾಗೋಲಿ ಗಣೇಕಲ್ ಇತರರಿದ್ದರು.