ಏಷ್ಯನ್ ಗೇಮ್ಸ್ ಕ್ರಿಕೆಟ್‌ನಲ್ಲಿ ನೇಪಾಳ ವಿಶ್ವ ದಾಖಲೆ

ಬೀಜಿಂಗ್,ಸೆ.೨೭- ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನೇಪಾಳ ಪುರುಷರ ಕ್ರಿಕೆಟ್ ತಂಡ ಟಿ-೨೦ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ದಾಖಲಿಸಿ ಇತಿಹಾಸ ನಿರ್ಮಿಸಿದೆ.
ಮಂಗೋಲಿಯಾ ವಿರುದ್ಧದ ಏಷ್ಯನ್ ಗೇಮ್ಸ್ ೨೦೨೩ ರ ಪಂದ್ಯದಲ್ಲಿ ನೇಪಾಳದ ಬ್ಯಾಟ್ಸ್‌ಮನ್‌ಗಳು ಮೂರು ವಿಶ್ವ ದಾಖಲೆ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಟಿ-೨೦ ಕ್ರಿಕೆಟ್ ಇತಿಹಾಸದಲ್ಲಿ ೩೦೦ ಕ್ಕೂ ಅಧಿಕ ಮೊತ್ತ ಗಳಿಸಿದ ಮೊದಲ ತಂಡ ಎನ್ನುವ ಹಿರಿಮೆಗೆ ಪಾತ್ರವಾಗಿದೆ. ೧೯ ವರ್ಷದ ಎಡಗೈ ಬ್ಯಾಟರ್ ಕುಶಾಲ್ ಮಲ್ಲಾ, ಡೇವಿಡ್ ಮಿಲ್ಲರ್ ಮತ್ತು ರೋಹಿತ್ ಶರ್ಮಾ ಅವರ ಜಂಟಿ ದಾಖಲೆಯನ್ನು ಮುರಿದು ೩೪ ಎಸೆತಗಳಲ್ಲಿ ವೇಗದ ಶತಕ ದಾಖಲಿಸಿದ್ದಾರೆ
೩ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮಲ್ಲಾ ೧೨ ಸಿಕ್ಸರ್‍ಗಳು ಮತ್ತು ಎಂಟು ಬೌಂಡರಿ ಸಹಿತ ೧೩೭ ರನ್ ಗಳಿಸಿ ಅಜೇಯರಾಗಿ ಉಳಿದರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮಂಗೋಲಿಯಾ ವಿರುದ್ಧ ನೇಪಾಳಕ್ಕೆ ೩ ವಿಕೆಟ್‌ಗೆ ೩೧೪ರನ್ ಗಳಿಸಿದರು.
೫ನೇ ಕ್ರಮಾಂಕದಲ್ಲಿ ಬಂದ ಬ್ಯಾಟರ್, ದೀಪೇಂದ್ರ ಸಿಂಗ್ ಐರಿ ಕೂಡ ದಾಖಲೆ ಬರೆದಿದ್ದಾರೆ ಯುವರಾಜ್ ಸಿಂಗ್ ಅವರ ೧೬ ವರ್ಷಗಳ ಹಳೆಯ ದಾಖಲೆ ಅಳಿಸಿದ್ದಾರೆ. ಒಂಬತ್ತು ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
೨೦೦೭ರ ಸೆಪ್ಟೆಂಬರ್ ೧೯,ರಂದು ಇಂಗ್ಲೆಂಡ್ ವಿರುದ್ಧದ ವಿಶ್ವ ಟಿ-೧೦ ಪಂದ್ಯದಲ್ಲಿ ೫೮ ರನ್ ಗಳಿಸುವ ಮಾರ್ಗದಲ್ಲಿ ಯುವರಾಜ್ ತಮ್ಮ ಅರ್ಧಶತಕಕ್ಕೆ ೧೨ ಎಸೆತಗಳನ್ನು ತೆಗೆದುಕೊಂಡಿದ್ದರು.
೨೦೧೯ರ ಫೆಬ್ರವರಿ ೨೩ ರಂದು ಐರ್ಲೆಂಡ್ ವಿರುದ್ಧ ೩ ವಿಕೆಟ್‌ಗೆ ೨೭೮ ರನ್ ಗಳಿಸಿದ್ದ ಅಫ್ಘಾನಿಸ್ತಾನ ಟಿ-೨೦ ನಲ್ಲಿ ಗರಿಷ್ಠ ಇನ್ನಿಂಗ್ಸ್ ಮೊತ್ತದ ಹಿಂದಿನ ದಾಖಲೆಯಾಗಿತ್ತು.ಅದನ್ನು ನೇಪಾಳ ತಂಡ ಅಳಿಸಿ ಹಾಕಿದೆ.