ಏಷ್ಯನ್ ಗೇಮ್ಸ್:ಸ್ಟೀಪಲ್, ಶಾಟ್ ಪುಟ್ ನಲ್ಲಿ ಭಾರತಕ್ಕೆ ಚಿನ್ನ

ಹ್ಯಾಂಗ್ ಝೌ,ಅ.1-ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಕೂಟದಲ್ಲಿ ಸ್ಟೀಪಲ್ ಮತ್ತು ಶಾಟ್ ಪುಟ್ ನಲ್ಲಿ ಭಾರತ ಎರಡು ಚಿನ್ನದ‌ ಪದಕಗಳನ್ನು ಬಾಚಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತ 13 ಚಿನ್ನದ ಪದಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಕ್ರೀಡಾಕೂಟದ ಎಂಟನೇ ದಿನವಾದ ಇಂದು ಮತ್ತೆರಡು ವಿಭಾಗಗಳಲ್ಲಿ ಭಾರತ ಸ್ವರ್ಣಪದಕ ಗಳಿಸಿದೆ.
3,000 ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಅವಿನಾಶ್ ಸೇಬಲ್ ಭಾಜನರಾಗಿದ್ದಾರೆ. ಅವಿನಾಶ್ 8 ನಿಮಿಷ 19 ಸೆಕೆಂಡ್​ 54 ಕ್ಷಣಗಳಲ್ಲಿ 3000 ಮೀಟರ್​ ಓಟವನ್ನು ಪೂರ್ಣಗೊಳಿಸಿ ಮೊಲದ ಸ್ಥಾನ ಪಡೆದರು. ಇದು ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಮೊದಲ ಚಿನ್ನ ದೊರೆತಿದೆ.
ಅವಿನಾಶ್ ಸೇಬಲ್ ಅವರ ಓಟದ ಸಮಯ ಏಷ್ಯನ್ ಗೇಮ್ಸ್​ನಲ್ಲಿ ನೂತನ ದಾಖಲೆಗೆ ಸಾಕ್ಷಿಯಾಗಿದೆ. 29 ವರ್ಷದ ಅವಿನಾಶ್ 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಜಪಾನ್‌ನ ರ್ಯೋಮಾ ಅಕಿ ಮತ್ತು ಸೆಯಾ ಸುನದಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದುಕೊಂಡರು.
ಪುರುಷರ ಶಾಟ್‌ಪುಟ್ ಫೈನಲ್ ಪಂದ್ಯವನ್ನು ಭಾರತದ ಅಥ್ಲೀಟ್ ತಜಿಂದರ್‌ಪಾಲ್ ಸಿಂಗ್ ತೂರ್ 7.26 ಕೆಜಿ ಕಬ್ಬಿಣದ ಗುಂಡನ್ನು 20.36 ಮೀ ದೂರಕ್ಕೆಸೆದು ಸತತ ಎರಡನೇ ಏಷ್ಯಾಡ್ ಚಿನ್ನದ ಪದಕ ಗಳಿಸಿದ ಕೀರ್ತಿಗ ಭಾಜನರಾಗಿದ್ದಾರೆ. ಆರರಲ್ಲಿ ಮೂರು ಕ್ಲೀನ್ ಥ್ರೋಗಳನ್ನು ಮಾಡಿದರು. ಪ್ರತಿ ಮೂರು ಪ್ರಯತ್ನದಲ್ಲೂ ದೂರ ಹೆಚ್ಚಿಸಿದರು. ಆರಂಭದಲ್ಲಿ ಎರಡು ಫೌಲ್‌ ಮಾಡಿದರು. ಆದರೆ ಮೂರು, ನಾಲ್ಕು ಮತ್ತು ಆರನೇ ಎಸೆತಗಳು ಕ್ರಮವಾಗಿ 19.51 ಮೀ, 20.06 ಮತ್ತು 20.36 ಮೀ ದೂರ ದಾಖಲಿಸಿ ಭಾರತಕ್ಕೆ ಚಿನ್ನದ ಮಾಲೆ ತೊಡಿಸಿದರು.
ಸೌದಿ ಅರೇಬಿಯಾದ ಮೊಹಮದ್‌ ದೌಡಾ ಟೊಲೊ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರೆ, ಚೀನಾದ ಲಿಯು ಯಾಂಗ್‌ ಕಂಚಿನ ಪದಕ ತಮ್ಮ ತೆಕ್ಕೆಗೆ ಹಾಕಿಕೊಂಡರು.
ಮತ್ತೊಂದೆಡೆ 50 ಕೆ.ಜಿ. ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ನಿಖತ್ ಜರೀನ್ ಪರಾಭವಗೊಂಡರು.
ಥಾಯ್ಲೆಂಡ್‌ನ ಚುತಮತ್ ರಕ್ಸತ್ ವಿರುದ್ಧ 3:2 ಪಾಯಿಂಟ್‌ಗಳಿಂದ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತ್ತಿಪಟ್ಟುಕೊಳ್ಳಬೇಕಾಯಿತು.