ಬೀಜಿಂಗ್.ಸೆ೨೩:ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ೧೯ನೇ ಏಷ್ಯನ್ ಕ್ರೀಡಾಕೂಟಕ್ಕೆ ಇಂದು ಅಧಿಕೃತವಾಗಿ ಚಾಲನೆ ಸಿಗಲಿದ್ದು ಉದ್ಘಾಟನಾ ಸಮಾರಂಭದಲ್ಲಿ ಭಾರತ ಹಾಕಿ ಟೀಮ್ ಕ್ಯಾಪ್ಟನ್ ಹರ್ಮನ್‌ಪ್ರೀತ್ ಸಿಂಗ್ ಹಾಗೂ ಒಲಿಂಪಿಕ್ ವಿಜೇತ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಭಾರತದ ಧ್ವಜದಾರಿಗಳು ಆಗಿದ್ದಾರೆ.
ಆದರೆ ಕೇಂದ್ರ ಕ್ರೀಡಾ ಸಚಿವ ಠಾಕೂರ್ ಈ ಕ್ರೀಡಾಕೂಟಕ್ಕೆ ಹೋಗದೇ ಚೀನಾದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ್ದಾರೆ.
೧೯ನೇ ಏಷ್ಯನ್ ಕ್ರೀಡಾಕೂಟಕ್ಕೆ ಅರುಣಾಚಲ ಪ್ರದೇಶದ ಮೂವರು ಅಥ್ಲೀಟ್ ಸ್ಪರ್ಧಿಗಳ ಪ್ರವೇಶವನ್ನು ಚೀನಾ ನಿರಾಕರಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಚೀನಾ ಪ್ರವಾಸವನ್ನು ರದ್ದು ಮಾಡಿದ್ದಾರೆ.
ಏಷ್ಯನ್ ಗೇಮ್ಸ್‌ನ ೪೧ ವಿಭಾಗಗಳಲ್ಲಿ ಭಾರತ ಸ್ಪರ್ಧೆ
೨೦೨೩ರ ಏಷ್ಯನ್ ಗೇಮ್ಸ್‌ನ ೧೯ನೇ ಆವೃತ್ತಿಯು ಸೆ.೧೯ ರಂದು ಪ್ರಾರಂಭವಾಗಿದ್ದು ಈಗಾಗಲೇ ಆಟಗಳನ್ನು ಆಡಿಸಲಾಗುತ್ತಿದೆ. ಆದರೆ ಅಧಿಕೃತವಾಗಿ ಇಂದು ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಈ ಗೇಮ್ಸ್‌ನಲ್ಲಿ ಭಾರತದ ೬೫೫ ಅಥ್ಲಿಟ್‌ಗಳು ಸ್ಪರ್ಧಿಸುತ್ತಿದ್ದು ಒಟ್ಟು ೬೧ ವಿಭಾಗಗಳಲ್ಲಿ ಭಾರತವು ೪೧ರಲ್ಲಿ ಸ್ಪರ್ಧೆ ಮಾಡುತ್ತಿದ್ದು ಹೆಚ್ಚಿನ ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಅಲ್ಲದೇ ಜಾವೇಲಿನ್ ಥ್ರೋಎಸೆತದಲ್ಲಿ ಚಿನ್ನದ ಪದಕ ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ೨೦೧೮ರ ಏಷ್ಯಾನ್ ಗೇಮ್ಸ್‌ನಲ್ಲಿ ಭಾರತವು ೭೦ ಪದಕಗಳನ್ನು ಗೆದ್ದು ದಾಖಲೆ ಮಾಡಿತ್ತು.
ಹಾಂಗ್‌ಝೌನ ೫೬ ಸ್ಥಳಗಲ್ಲಿ ಈ ಗೇಮ್ಸ್ ನಡೆಯುತ್ತಿದ್ದು ಭಾರತದ ಸ್ಟಾರ್ ಅಥ್ಲೀಟ್?ಗಳಾದ ನೀರಾಜ್ ಚೋಪ್ರಾ, ಪಿವಿ ಸಿಂಧು, ಹಾಕಿ ತಂಡ, ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿಯಿಂದ ಪದಕ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.