ಏಷಿಯನ್ ಪೇಂಟ್ಸ್‍ನಿಂದ ವಂಚನೆ: ಕ್ರಮಕೈಗೊಳ್ಳಲು ಒತ್ತಾಯ

ಮೈಸೂರು. ನ.3: ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ರೈತರ ಕುಟುಂಬಿಕರಿಗೆ ಏಷಿಯನ್ ಪೇಂಟ್ಸ್ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅತಿ ಕಡಿಮೆ ದರದಲ್ಲಿ ಭೂಮಿ ಪಡೆದುಕೊಂಡು ಬಳಿಕ ಉದ್ಯೋಗವನ್ನೇ ನೀಡಿಲ್ಲ, ಬೇರೆ, ಬೇರೆ ಕಡೆಯವರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದ್ದು, ಸ್ಥಳಿಯರನ್ನು ಕಡೆಗಣಿಸಲಾಗಿದೆ ಈ ಕುರಿತು ಜಿಲ್ಲಾಡಳಿತದ ಗಮನಕ್ಕೆ ತಂದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲವೆಂದು ರೈತ ಸಂಘ ಆರೋಪಿಸಿದೆ.
ಜಿಲ್ಲಾಧಿಕಾರಿ ಕಛೇರಿ ಎದುರಿರುವ ಉದ್ಯಾನವನದಲ್ಲಿಂದು ಹೊಸಕೋಟೆ ಬಸವರಾಜು ನೇತೃತ್ವದಲ್ಲಿ ಜಮಾಯಿಸಿದ ರೈತರು ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿನ ರೈತರು ಏಷ್ಯನ್ ಪೇಂಟ್ಸ್ ಗೆ ಭೂಮಿ ಮಾರಿದ್ದು, ರೈತರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಕಾರ್ಖಾನೆ ಆರಂಭಿಸಲು 175 ಎಕರೆ ಖರೀದಿ ಮಾಡಲಾಗಿತ್ತು. ಕಾರ್ಖಾನೆ ಆರಂಭವಾದ ಬಳಿಕ ಉದ್ಯೋಗ ನೀಡಲು ನಿರಾಕರಿಸಿದೆ. ರೈತರ ಮಕ್ಕಳು ಹಾಗೂ ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗ ನೀಡದೆ ವಂಚಿಸಿದೆ ಎಂದು ಆರೋಪಿಸಿದರು. ಜಿಲ್ಲಾಡಳಿತ ಉದ್ಯೋಗ ನೀಡುವಂತೆ ಸೂಚನೆ ನೀಡಿತ್ತು. ಜಿಲ್ಲಾಡಳಿತದ ಸೂಚನೆಗೂ ಕಾರ್ಖಾನೆ ಕಿಮ್ಮತ್ತು ನೀಡುತ್ತಿಲ್ಲ. ಕಾರ್ಖಾನೆಯ ಧೋರಣೆ ಖಂಡಿಸಿ ರೈತ ಸಂಘದ ವತಿಯಿಂದ ನಾವೆಲ್ಲ ರೈತರು ಹೋರಾಟ ನಡೆಸುತ್ತಲೇ ಇದ್ದೇವೆ. ಆದರೆ ಏನೂ ಪ್ರಯೋಜನವಾಗುತ್ತಿಲ್ಲ. ಗ್ರಾಮದ ರೈತರಿಗೆ ಖಾಯಂ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅತಿ ಕಡಿಮೆ ದರದಲ್ಲಿ ಭೂಮಿ ಪಡೆದುಕೊಂಡ ಏಷ್ಯನ್ ಪೇಂಟ್ಸ್ ಈಗ ರೈತರಿಗೆ ಸಾಕಷ್ಟು ವಿದ್ಯಾಭ್ಯಾಸ ಇಲ್ಲ ಎಂದು ಅತಿ ಕೆಳ ದರ್ಜೆಯ ಕೆಲಸ ನೀಡುವುದು ಅಥವಾ ಉದ್ಯೋಗವನ್ನೇ ನೀಡಿದಿರುವುದನ್ನು ನಾವು ವಿರೋಧಿಸುತ್ತೇವೆ ಎಂದರು. ಈ ಕುರಿತು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಆದರೆ ಕ್ರಮ ಕೈಗೊಳ್ಳುತ್ತಿಲ್ಲ, ಕಂಪನಿಗೆ ಮುತ್ತಿಗೆ ಹಾಕುತ್ತೇವೆ. ರೈತರಿಗೆ ಏನಾದರೂ ಆದರೆ ಜಿಲ್ಲಾಡಳಿತವೇ ಹೊಣೆಯಾಗಬೇಕು ಎಂದು ಹೇಳಿದರು. ನೂರಾರು ರೈತರು ಪಾಲ್ಗೊಂಡಿದ್ದರು.