ಏಳು ವರ್ಷದ ನಂತರ ಗಿರಿಜಿಲ್ಲೆಗೆ ಸಚಿವ ಸಂಪುಟದಲ್ಲಿ ಆದ್ಯತೆ

ಕೆಂಭಾವಿ:ಮೇ.28: ಸರಳ ಹಾಗೂ ಸಹಾನುಭೂತಿಯ ನಾಯಕರಾದ
ಶಹಪೂರ ಮತಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಣ್ಣ ಕೈಗಾರಿಕಾ ಮತ್ತು ಸರ್ವಾಜನಿಕ ಉದ್ಯಮ ಖಾತೆ ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ದೊರತಿದೆ. ಇದರಿಂದ ಜಿಲ್ಲೆಗೆ ಕಳೆದ 6 ವರ್ಷದ ನಂತರ ಸ್ಥಳೀಯ ಶಾಸಕರಿಗೆ ಸಚಿವಗಿರಿ ಸಿಕ್ಕಿದೆ. ಜಿಲ್ಲೆಯಲ್ಲಿ ಕಾರ್ಯಕರ್ತರ ಮತ್ತು
ಅಭಿಮಾನಿಗಳ ಸಂತೋಷ ಇಮ್ಮಡಿಯಾಗಿದೆ.

ಶಹಾಪುರ ಮತಕ್ಷೇತ್ರದಿಂದ 5ನೇ ಬಾರಿಗೆ ಗೆಲುವು ಸಾಧಿಸಿದ ಶಾಸಕ ದರ್ಶನಾಪುರ ಅವರಿಗೆ ಈ ಬಾರಿಯ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವ ಸ್ಥಾನ ಘೋಷಣೆಯಾಗಿದೆ. 1994, 2004, 2008, 2018, 2023 ಹೀಗೆ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

1994ರಲ್ಲಿ ಇಂಧನ ಸಚಿವ, 2006ರಲ್ಲಿ ಕೃಷಿ ಮಾರುಕಟ್ಟೆ ಸಚಿವರಾಗಿ ಈಗಾಗಲೇ ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇರುವ ದರ್ಶನಾಪುರ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಒಲಿದು ಬಂದಿದ್ದು, ಜಿಲ್ಲೆಗೆ ಸಮಾಧಾನ ತಂದಿದೆ.

ಇಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಜಿಲ್ಲೆಯವರಿಗೆ ದಕ್ಕಿರಲಿಲ್ಲ. ಅಲ್ಲದೇ ಅದು ಪತನವಾದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲೂ ಜಿಲ್ಲೆಗೆ ಆದ್ಯತೆ ಸಿಕ್ಕಿರಲಿಲ್ಲ. ಯಾದಗಿರಿ, ಸುರಪುರದಲ್ಲಿ ಬಿಜೆಪಿ ಶಾಸಕರಿದ್ದರೂ ಕೂಡ ನಿಗಮ ಮಂಡಳಿಗೆ ಮಾತ್ರ ತೃಪ್ತಿ ಪಡುವಂತೆ ಆಗಿತ್ತು.

2017 ರ ಸಿದ್ದರಾಮಯ್ಯ ಸರ್ಕಾರದಲ್ಲಿ ಗುರುಮಠಕಲ್ ಮತಕ್ಷೇತ್ರದ ಬಾಬುರಾವ ಚಿಂಚನಸೂರ ಅವರಿಗೆ ಸಚಿವ ಸ್ಥಾನ ಸ್ಥಳೀಯರಿಗೆ ನೀಡಿರುವುದೇ ಕೊನೆಯಾಗಿತ್ತು. ಕ್ಷೇತ್ರದಲ್ಲಿ ಕಳೇದ ಬಾರಿ ಶಾಸಕರಾಗಿ ಅನೇಕ ಜನಪರ ಕೆಲಸ ಕಾರ್ಯಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದರು ಹೈ ಕಮಾಂಡ ಕೂಡ ದರ್ಶನಾಪೂರರ ನಂಬಿಕೆಗೆ ಹುಸಿಮಾಡದೆ ಮಂತ್ರಿಯಾಗಿ ಮಾಡಿದೆ.

ಅಭಿಮಾನಿಗಳ ಸಂಭ್ರಮ: ಶಾಸಕ ದರ್ಶನಾಪುರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಭಿಮಾನಿಗಳು ಪಟಾಕಿ ಹಚ್ಚಿ ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು.