ಏಳು ವರ್ಷಗಳ ನಂತರ ವಿದ್ಯಾರ್ಥಿ ಮುಖಂಡರ ಖುಲಾಸೆ

ಬಳ್ಳಾರಿ ನ.21: ಶಾಲಾ ಕಾಲೇಜಿಗೆ ಬಂದು ಗಲಾಟೆ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳ ಮೇಲಿನ ಆರೋಪದ ಪ್ರಕರಣ ಕಳೆದ 7 ವರ್ಷಗಳ ನಂತರ ಸುದೀರ್ಘ ವಿಚಾರಣೆ ನಡೆದು ಇಂದು ಇಲ್ಲಿನ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದೆ.
ಕಳೆದ 2013 ಫೆಬ್ರುವರಿ 1 ರಂದು ನಗರದಲ್ಲಿರುವ ನಳಂದ ಪಿಯು ಕಾಲೇಜಿನ ವಿದ್ಯಾರ್ಥಿ ಕೃಷ್ಣಮೂರ್ತಿ ಹಾಗೂ ನಂದಿ ಶಾಲೆಯ ವಿದ್ಯಾರ್ಥಿ ರವಿತೇಜ ಅವರ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ಗೆ ಆಗ್ರಹಿಸಿ ಶಾಲಾ ಕಾಲೇಜು‌ಬಂದ್ ಮಾಡಿಸಿ ಎಬಿವಿಪಿ ಸಂಘಟನೆಯಿಂದ ಪ್ರತಿಭಟನೆ ನಡೆಸಿತ್ತು.
ಆದರೆ ಈ ಹೋರಾಟಕ್ಕೆ ಸಹಕರಿಸದೇ ಇದ್ದ ನಂದಿ ಶಾಲೆಗೆ ತೆರಳಿದ್ದ ವಿದ್ಯಾರ್ಥಿ ಸಂಘಟನೆಯ ಮುಖಂಡರು ಶಾಲೆಯ ಸಿಬ್ಬಂದಿ‌ ಜೊತೆ ವಾಗ್ವಾದಕ್ಕೆ ಇಳಿದು ‌ಒಂದಿಷ್ಟು ಗಲಾಟೆಯಾಗಿತ್ತು.
ಈ ಸಂದರ್ಭದಲ್ಲಿ ಪೊಲೀಸರು ಬಂದು ವಿದ್ಯಾರ್ಥಿ ಮುಖಂಡರಾದ ಅಡವಿಸ್ವಾಮಿ, ಪ್ರಶಾಂತ್ ಪವಾರ, ಮಹಾಂತೇಶ್ ನಾಯಕ, ಒಂಪ್ರಕಾಶ, ಮಣಿಕಂಠರೆಡ್ಡಿ, ಶಿವಪ್ರಸಾದ್, ಶ್ರೀಧರ ಜೋಶಿ, ರವಿ ಗೌಡ, ಪಾಲಯ್ಯ ಮೊದಲಾದವರ ಮೇಲೆ ಲಾಠಿ ಪ್ರಹಾರ ಮಾಡಿ ಪ್ರಕರಣ ದಾಖಲಿಸಿ ಬಳ್ಳಾರಿ ಕಾರಾಗೃಹಕ್ಕೆ ಕಳಿಸಿದ್ದರು. ಅಲ್ಲದೆ ವಿದ್ಯಾರ್ಥಿಗಳಿಗೆ ಪೋಲಿಸರು ಕೈಕೋಳ ತೊಡಿಸಿದ್ದು ಅಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿತ್ತು.
ಈ ಬಗ್ಗೆ ನ್ಯಾಯಾಲಯದಲ್ಲಿ ಏಳು ವರ್ಷಗಳ ಕಾಲ ವಾದ ಪ್ರತಿವಾದಗಳು ನಡೆದು ಆರೋಪಿತರಾದ ವಿದ್ಯಾರ್ಥಿ ಮುಖಂಡರ ಮೇಲಿನ ಪ್ರಕರಣವನ್ನು ಇಂದು ಬಳ್ಳಾರಿಯ ಎರಡನೇ ಅಪರ ಸಿವಿಲ್ ನ್ಯಾಯಾಧೀಶರಾದ ರಘುನಾಥ ಗೌಡ ಕೆ.ಟಿ. ಅವರು ಪ್ರಕರಣದಲ್ಲಿ ಆರೋಪ ಸಾಬೀತು‌ ಪಡಿಸಲು ಸಾಕ್ಷಗಳು ಸಕಾರಣವಲ್ಲದ ಕಾರಣ ಖುಲಾಸೆಗೊಳಿಸಿದ್ದಾರೆ.
ಏಳು ವರ್ಷಗಳ ನಂತರ ನಮ್ಮ ಹೋರಾಟಕ್ಕೆ ನ್ಯಾಯಾಂಗದ ಮೂಲಕವೇ ಜಯ ಸಿಕ್ಕಿದೆಂದು ಅಡವಿ ಸ್ವಾಮಿ‌ ಹೇಳಿದ್ದಾರೆ.
ವಿದ್ಯಾರ್ಥಿ ಮುಖಂಡರ ಮೇಲಿನ ಪ್ರಕರಣವನ್ನು ಯಾವುದೇ ಸಂಭಾವನೆ ಪಡೆಯದೆ ಆರೋಪ ಮುಕ್ತರನ್ನಾಗಿ ನ್ಯಾಯ ದೊರಕಿಸಿಕೊಡುವಲ್ಲಿ ಕಾರಣರಾದ ನ್ಯಾಯವಾದಿ ಹೆಚ್.ಎಂ. ಅಂಕಲಯ್ಯ ಅವರನ್ನು ಸ್ಮರಿಸಿ. ವಿದ್ಯಾರ್ಥಿ ಜೀವನದ ಹೋರಾಟಗಳು ಈ ಪ್ರಕರಣದಲ್ಲಿ ನಮಗೆ ಸಿಕ್ಕಿರುವ ಜಯಕ್ಕೆ ಸಾಮಾಜಿಕ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆಂದು ಪ್ರಕರಣದಲ್ಲಿ‌ ಖುಲಾಸೆಗೊಂಡ ಮುಖಂಡರು ಅಭಿಪ್ರಾಯಪಟ್ಟರು.