ಏಳು ವರ್ಷಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಸ್ವಾಲಂಬನೆ; ಸುಧಾಕರ್

ಚಿಕ್ಕಬಳ್ಳಾಪುರ ಜು.೩೦: ದೇಶ ಸಮರ್ಥವಾಗಿ ಪ್ರಗತಿಯತ್ತ ಮುನ್ನಡೆಯಲು ವಿದ್ಯುತ್ ಪಾತ್ರವೂ ಮಹತ್ವದ್ದಾಗಿದ್ದು, ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ೧೦,೧,೭೨೨ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ೧.೫ ಲಕ್ಷ ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದನೆ ಮಾಡಿ ದೇಶದ ಪ್ರತಿ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲು ಕಾರಣವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಇಂಧನ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಅಂದಾರ್ಲಹಳ್ಳಿ ಗ್ರಾಮ ಹಾಗೂ ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ “ಉಜ್ವಲ ಭಾರತ, ಉಜ್ವಲ ಭವಿಷ್ಯ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ವಿದ್ಯುತ್ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ೬೮ ವರ್ಷಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಸಾಧಿಸಲಾಗದ್ದನ್ನು ಪ್ರಸ್ತುತ ಕೇಂದ್ರ ಸರ್ಕಾರ ಕೇವಲ ೭ ವರ್ಷಗಳಲ್ಲಿ ಸಾಧಿಸಿ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆ. ೬೮ ವರ್ಷಗಳಲ್ಲಿ ೨.೫ ಲಕ್ಷ ಮೆಗಾವ್ಯಾಟ್ ವಿದ್ಯುತ್ ಅನ್ನು ದೇಶ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿತ್ತು. ಪ್ರಸ್ತುತ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರ ಕೇವಲ ೭ ವರ್ಷಗಳ ಅವಧಿಯಲ್ಲಿ ೧.೫ ಲಕ್ಷ ಮೆಗಾವ್ಯಾಟ್ ಅಧಿಕ ವಿದ್ಯುತ್ ಅನ್ನು ಉತ್ಪಾದಿಸಿ ಸ್ವಾವಲಂಬನೆ ಸಾಧಿಸುವ ಜೊತೆಗೆ ವಿದೇಶಗಳಿಗೂ ವಿದ್ಯುತ್ ರಫ್ತು ಮಾಡುತ್ತಿದೆ. ಪ್ರಸ್ತುತ ದೇಶದಲ್ಲಿ ೪ ಲಕ್ಷ ಮೆಗಾವ್ಯಾಟ್ ಗೂ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದರು.
ದೇಶದ ಈಶಾನ್ಯ ರಾಜ್ಯಗಳ ಬುಡಕಟ್ಟು ಸಮುದಾಯಗಳ ವಸತಿ ಪ್ರದೇಶಗಳೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿದ್ದ ಪ್ರದೇಶಗಳಿಗೆ ಆದ್ಯತೆಯ ಮೇರೆಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿ ಅಲ್ಲಿನ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ದೂರದೃಷ್ಟಿ ಮತ್ತು ಸಮರ್ಥ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
ಸದ್ಯ ದೇಶದಲ್ಲಿ ಅಗತ್ಯವಿರುವುದು ಕೇವಲ ೨.೨೦ ಲಕ್ಷ ಮೆಗಾವ್ಯಾಟ್ ವಿದ್ಯುತ್ ಆಗಿದ್ದು, ಉಳಿದ ಸುಮಾರು ೧.೮೫ ಲಕ್ಷ ಮೆಗಾವ್ಯಾಟ್ ನಷ್ಟು ವಿದ್ಯುತ್ ವಿದೇಶಗಳಿಗೆ ರಫ್ತಾಗುತ್ತಿದೆ. ಇದು ಪ್ರಧಾನಿಯವರ ಆತ್ಮನಿರ್ಭರ ಮತ್ತು ಸಮೃದ್ಧಿಯ ಹಾಗೂ ನವಭಾರತ ನಿರ್ಮಾಣದ ಪರಿಕಲ್ಪನೆಗೆ ಪೂರಕವಾಗಿದೆ ಎಂದರು.
ದೇಶದಲ್ಲಿ ಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆಯ ಜೊತೆಗೆ ನವೀಕರಿಸಬಹುದಾದ ಪರಿಸರಸ್ನೇಹಿ ಇಂಧನ ಉತ್ಪಾದನೆಗೂ ಸರ್ಕಾರ ಕ್ರಮ ಕೈಗೊಂಡಿದ್ದು. ಪ್ರಸ್ತುತ ಈ ರೀತಿಯ ಇಂಧನ ಶೇ.೩೦ ರಿಂದ ೪೦ ರಷ್ಟು ಉತ್ಪಾದನೆಯಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಇಂಧನ ಇಲಾಖೆ ರೂಪಿಸಿದ ನೂತನ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮನೆಗಳಲ್ಲಿ ೭೫ ಯೂನಿಟ್ ವಿದ್ಯುತ್ ಬಳಸುವಷ್ಟು ಹಣವನ್ನು ಉಚಿತವಾಗಿ ಪ್ರತಿ ತಿಂಗಳು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು. ೭೫ ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಉಪಯೋಗಿಸಿದಲ್ಲಿ ಹಣ ಪಾವತಿಸಬೇಕು. ಈ ನಿಟ್ಟಿನಲ್ಲಿ ವಿದ್ಯುತ್ ನ್ನು ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
೨೦೨೩ ಕ್ಕೆ ಎತ್ತಿನ ಹೊಳೆ ನೀರು ಜಿಲ್ಲೆಗೆ ಮುಖ್ಯಮಂತ್ರಿಗಳು ಈ ಬಾರಿ ಆಯವ್ಯಯದಲ್ಲಿ ಎತ್ತಿನ ಹೊಳೆ ಯೋಜನೆಗೆ ಸುಮಾರು ೩ ಸಾವಿರ ಕೋಟಿ ಅನುದಾನವನ್ನು ಘೋಷಿಸಿದ್ದರು. ಅದಕ್ಕೆ ಅಧಿಕವಾಗಿ ಒಂದು ಸಾವಿರ ಕೋಟಿ ರೂಗಳನ್ನು ನೀಡಲಾಗುತ್ತಿದ್ದು, ಒಟ್ಟಾರೆ ೪ ಸಾವಿರ ಕೋಟಿ ರೂ ಎತ್ತಿನ ಹೊಳೆ ಯೋಜನೆ ಕಾಮಗಾರಿಗಳು ವ್ಯವಸ್ಥಿತ ಹಾಗೂ ವೈಜ್ಞಾನಿಕವಾಗಿ ಮುಂದುವರೆಯಲಿವೆ. ೨೦೨೩ ಡಿಸೆಂಬರ್ ಅಂತ್ಯಕ್ಕೆ ಎತ್ತಿನ ಹೊಳೆ ನೀರು ಜಿಲ್ಲೆಗೆ ತಲುಪಲಿದೆ ಎಂದರು.
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಎಚ್.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ಹಾಗೂ ವೃಷಭ ವ್ಯಾಲಿ ಯೋಜನೆಗಳು ಚಾಲ್ತಿಯಲ್ಲಿವೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಮಾತನಾಡಿ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಸುಮಾರು ೧೪.೬೧ ಕೋಟಿ ರೂ ವೆಚ್ಚದಲ್ಲಿ ಜಿಲ್ಲೆಯ ೭೭೧ ಗ್ರಾಮಗಳ ೭,೩೨೧ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಈಗಾಗಲೇ ೧೦೯ ಗ್ರಾಮಗಳಲ್ಲಿ ೧,೧೪೬ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐ.ಪಿ.ಡಿ.ಎಸ್)ಯಡಿ ಸುಮಾರು ೧೧.೫ ಕೋಟಿ ರೂ ಅನುದಾನದಲ್ಲಿ ೨೭.೬೬ ಕಿಲೋ ಮೀಟರ್ ಮಾರ್ಗಗಳನ್ನು, ೨೩.೬೧ ಕಿಲೋ ಎಲ್.ಟಿ ಮಾರ್ಗಗಳು ನಿರ್ಮಿಸಲಾಗಿದೆ ಎಂದರು.
ಬೆಳಕು ಯೋಜನೆಯಡಿ ೪.೫೦ ಕೋಟಿ ರೂ ವೆಚ್ಚದಲ್ಲಿ ಜಿಲ್ಲೆಯಲ್ಲಿರುವ ೬,೨೬೯ ಬಿ.ಪಿ.ಎಲ್. ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಹಾಗೂ ಅಧ್ಯಕ್ಷರಾದ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ.ಎಸ್.ಜಯಚಂದ್ರ, ಬೀಚಗಾನ ಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ ನರಸಪ್ಪ, ಪವರ್ ಗ್ರೀಡ್ ಪ್ರಧಾನ ವ್ಯವಸ್ಥಾಪಕರಾದ ಪಿ.ಶ್ರೀನಿವಾಸ್, ಚಿಕ್ಕಬಳ್ಳಾಪುರ ವಿಭಾಗದ ಪಿ.ಎಲ್.ಡಿ ಬ್ಯಾಂಕಿನ ನಿರ್ದೇಶಕರಾದ ಆನಂದಮೂರ್ತಿ, ಕೋಲಾರ ವೃತ್ತದ ಅಧೀಕ್ಷಕ ಇಂಜಿನಿಯರ್ ಎ.ಆರ್.ಮೃತ್ಯುಂಜಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.