ಏಳುಬೆಂಚಿ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿದ ರಾಜ್ಯೋತ್ಸವ

ಸಂಜೆವಾಣಿ ವಾರ್ತೆ
ಕುರುಗೋಡು ನ.02: ‘ಕನ್ನಡನಾಡಿನ ನೆಲ, ಜಲ, ಭಾಷೆ, ಸಾಹಿತ್ಯ ಮತ್ತು ಭವ್ಯ ಸಂಸ್ಕೃತಿಯ ಉಳಿವಿಗಾಗಿ ಎಲ್ಲರು ಒಗ್ಗಟ್ಟಿನಿಂದ ಶ್ರಮಿಸಬೇಕು’ ಎಂದು ಏಳುಬೆಂಚಿ ಸಾಯಿ ಜ್ಞಾನಪೀಠ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಡಿ.ಶಂಕರ್‍ದಾಸ್ ಹೇಳಿದರು.
ಇಲ್ಲಿಗೆ ಸಮೀಪದ ಏಳುಬೆಂಚಿ ಗ್ರಾಮದ ಸಾಯಿ ಜ್ಞಾನಪೀಠ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಏಳುಬೆಂಚಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಹಾಗೂ ಪ್ರತಿ ವರ್ಷ ನಂ.1ರಂದು ಕನ್ನಡ ತಾಯಿಯ ಭಾವಚಿತ್ರದ ಜೊತೆಗೆ ನಟ ದಿ.ಪುನಿತ್‍ರಾಜಕುಮಾರ್ ಅವರ ಬಾವಚಿತ್ರದೊಂದಿಗೆ ರಾಜ್ಯೋತ್ಸವನ್ನು ಆಚರಿಸಲಾಗುದು’ ಎಂದು ಗೌರವಪೂರ್ವಕವಾಗಿ ಘೋಷಿಸಿದರು.
ಸಾಯಿ ಜ್ಞಾನಪೀಠ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕ ಕೆ.ಅಂಬಣ್ಣ ಮಾತನಾಡಿ, ‘ಏಳುಬೆಂಚಿ ಗ್ರಾಮದಲ್ಲಿ ನೂತನವಾಗಿ ಆರಂಭವಾಗಿರುವ ಈ ಶಾಲೆಯ ಅಭಿವೃದ್ಧಿಗೆ ಎಲ್ಲರು ಸಹಕರಿಸಬೇಕು’ ಎಂದರು.
ಗ್ರಾಮದ ವಿಕಲಚೇತನ ಸಂಘದ ಅಧ್ಯಕ್ಷ ಎರ್ರಿಸ್ವಾಮಿ ಮಾತನಾಡಿ, ‘ಇಂದಿನ ಆಧುನಿಕ ಯುಗದಲ್ಲಿ ಸಭೆ ಸಮಾರಂಭಗಳಲ್ಲಿ ದೊಡ್ಡ ನಾಯಕರನ್ನು ಗುರುತಿಸುವುದು ವಾಡಿಕೆ ಆದರೆ ಈ ಶಾಲಾ ಆಡಳಿತ ಮಂಡಳಿಯವರು ನಮ್ಮಂತಹ ವಿಕಲಚೇತರನ್ನು ಗುರುತಿಸಿ ಕಾರ್ಯಕ್ರಮದ ಧ್ವಜಾರೋಹಣಕ್ಕೆ ಆಹ್ವಾನಿಸಿ ನಮ್ಮನ್ನು ಸನ್ಮಾನಿಸಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ’ ಎಂದರು.
ನಂತರ 80 ಜನ ವಿಕಲಚೇತನರನ್ನು ಶಾಲಾ ಆಡಳಿತ ಮಂಡಳಿಯವತಿಯಿಂದ ಸನ್ಮಾನಿಸಲಾಯಿತು ಹಾಗೂ ಶಾಲಾ ಆಡಳಿತ ಮಂಡಳಿಯ ನೇತೃತ್ವದಲ್ಲಿ ಸುಮಾರು 330 ಮೀಟರ್ ಉದ್ದದ ಕನ್ನಡ ಧ್ವಜವನ್ನು ಅನಾವರಣಗೊಳಿಸಿ ಸಂಭ್ರಮಿಸಿದರು.
ಗ್ರಾ.ಪಂ. ಅಧ್ಯಕ್ಷೆ ರೇಣುಕಮ್ಮ, ಸದಸ್ಯರಾದ ಕೆ.ಮಂಜುನಾಥ, ಎನ್.ಎರ್ರಿಸ್ವಾಮಿ, ಮುಖ್ಯ ಶಿಕ್ಷಕ ಮುಖ್ಯಗುರು ಶರಣಪ್ಪ, ಶಾಲಾ ವ್ಯವಸ್ಥಾಪಕ ಕೆ.ಅಂಜಿನಿ, ಮುಖಂಡರಾದ ಡಿ.ಹೇಮಚಂದ್ರದಾಸ್, ಕರುಣಾಮೂರ್ತಿಸ್ವಾಮಿ, ವಿರುಪಾಕ್ಷಿ, ಮಂಜು, ಗಾಧಿಲೇಖನ, ಶಾಲೆಯ ಎಲ್ಲ ಶಿಕ್ಷಕ, ಸಿಬ್ಬಂದಿ ವರ್ಗ ಇದ್ದರು.