ಏಳನೇ ಮಹಡಿಯಿಂದ ಜಿಗಿದು ವೃದ್ಧೆ ಆತ್ಮಹತ್ಯೆ

ಉಡುಪಿ, ಜೂ.೭- ವೃದ್ಧೆಯೊರ್ವರು ವಸತಿ ಸಂಕೀರ್ಣದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ಮೃತರನ್ನು ಚಿತ್ರದುರ್ಗ ಮೂಲದ ಗಂಗಮ್ಮ (೭೦) ಎಂದು ಗುರುತಿಸಲಾಗಿದೆ. ನಗರದ ಬಿಗ್ ಬಝಾರ್ ಸನಿಹದಲ್ಲಿರುವ ವಸತಿ ಸಂಕೀರ್ಣದಲ್ಲಿಯ ಮಗನ ಮನೆಯಲ್ಲಿ ಕೆಲವು ತಿಂಗಳುಗಳಿಂದ ವಾಸವಾಗಿದ್ದರು. ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಬಾಧಿತರಾಗಿ ಗುಣಮುಖರಾಗಿದ್ದರು. ಇವರ ಪತಿಯು ಕೊರೋನ ಪಾಸಿಟಿವ್ ಇರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿಯ ಅನಾರೋಗ್ಯದ ಕಾರಣ ಮನನೊಂದ ಗಂಗಮ್ಮ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಶವಪರೀಕ್ಷೆಗಾಗಿ ಶವಸಾಗಿಸಲು ಇಲಾಖೆಗೆ ಸಹಕರಿಸಿದರು. ಘಟನ ಸ್ಥಳಕ್ಕೆ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಸಿಬ್ಬಂದಿ ಅರುಣ್ ಯು. ಆಗಮಿಸಿ ಕಾನೂನು ಪ್ರಕ್ರಿಯೆ ನಡೆಸಿದರು. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.