ಏರ್ ಸೆಲ್ ಮ್ಯಾಕ್ಸಿಸ್ ಹಗರಣ: ಚಿದು, ಕಾರ್ತಿಗೆ ದೆಹಲಿ ಕೋರ್ಟ್ ನಿಂದ ಸಮನ್ಸ್

ನವದೆಹಲಿ, ನ.27-ಏರ್‌ಸೆಲ್–ಮ್ಯಾಕ್ಸಿಸ್ ಪ್ರಕರಣದಲ್ಲಿ ಕಾಂಗ್ರೆಸ್ ನ‌ ಹಿರಿಯ ನಾಯಕ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗುವಂತೆ ಧೆಹಲಿ‌ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿದ ದೆಹಲಿ ಕೋರ್ಟ್, ಡಿಸೆಂಬರ್ 20ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪಿ. ಚಿದಂಬರಂ ಮತ್ತು ಮಗ ಕಾರ್ತಿಗೆ ಸಮನ್ಸ್ ಜಾರಿ ಮಾಡಿದೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಚಿದಂಬರಂ ಮತ್ತು ಇತರ ಆರೋಪಿಗಳ ವಿರುದ್ಧ ಸಮರ್ಪಕ ಪುರಾವೆಗಳು ದೊರೆತಿವೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಕೆ. ನಾಗಪಾಲ್ ತಿಳಿಸಿ, ಈ ಹಿನ್ನೆಲೆಯಲ್ಲಿ ಚಿದಂಬರಂ ಮತ್ತು ಕಾರ್ತಿಯವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ತನಿಖೆಗೆ ಪೂರಕವಾಗಿ ಅಗತ್ಯ ಮಾಹಿತಿ ಒದಗಿಸಲು ಕೋರಿ ಬ್ರಿಟನ್‌ ಮತ್ತು ಸಿಂಗಪುರ ಕೋರ್ಟ್‌ಗೆ ಪತ್ರ ಬರೆಯಲಾಗಿದೆ. ಈ ವಿಷಯದಲ್ಲಿ ಭಾಗಶಃ ಪ್ರಗತಿ ಕಾಣಿಸಿಕೊಂಡಿದೆ ಎಂದು ಇದಕ್ಕೂ ಮುನ್ನ ತನಿಖಾ ಸಂಸ್ಥೆಗಳ ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದರು.
3500 ಕೋಟಿ ಹಗರಣ ಇದಾಗಿದ್ದು, ಚಿದಂಬರಂ ಅವರು ಈ ಪ್ರಕರಣದ ಮೊದಲನೇ ಆರೋಪಿಯಾಗಿದ್ದಾರೆ.