ಏರ್ ಇಂಡಿಯಾ ಸಿಬ್ಬಂದಿವಜಾ ಆದೇಶ ರದ್ದು

ನವದೆಹಲಿ,ಮೇ.೧೦-ಸಾಮೂಹಿಕ ಅನಾರೋಗ್ಯದ ರಜೆ ಹಾಕಿದ್ದ ೨೫ ಮಂದಿ ಕ್ಯಾಬಿನ್ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದ್ದ ಏರ್ ಇಂಡಿಯ್ ಎಕ್ಸ್ ಪ್ರೆಸ್ ವಿಮಾನಯಾನ ಕಂಪನಿ,ವಜಾ ಆದೇಶ ರದ್ದು ಮಾಡಿದೆ.
ಸಿಬ್ಬಂದಿ ಅನಾರೋಗ್ಯದ ಕಾರಣ ನೀಡಿ ರಜೆ ಹಾಕಿದ್ದರಿಂದ ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆ ೧೭೦ ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿತ್ತು. ಇದರ ಬೆನ್ನಲ್ಲೆ ಎಲ್ಲಾ ೨೫ ಮಂದಿಯನ್ನು ಕೆಲಸದಿಂದ ಸಂಸ್ಥೆ ವಜಾ ಮಾಡಿತ್ತು
ವಿಮಾನಯಾನ ಸಂಸ್ಥೆಯ ನಿರ್ಧಾರವನ್ನು ಪ್ರತಿಭಟಿಸಿ ವಜಾಗೊಂಡ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಸಾಮೂಹಿಕ ಅನಾರೋಗ್ಯದ ರಜೆ ಹಿಂಪಡೆದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆ ಎಲ್ಲರ ವಜಾ ಆದೇಶ ರದ್ದು ಮಾಡಿದೆ. ಹೀಗಾಗಿ ಎಲ್ಲರೂ ಮರಳಿ ಕೆಲಸಕ್ಕೆ ತೆರಳಲು ನಿರ್ಧರಿಸಿದ್ದಾರೆ.
ಮಹತ್ವದ ಬೆಳವಣಿಗೆಯಲ್ಲಿ ವಿಮಾನಯಾನ ಸಂಸ್ಥೆ ವಜಾ ಮಾಡಿದ ೨೫ ಮಂದಿಯನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದು ಸೇರಿದಂತೆ ಸಿಬ್ಬಂದಿಯ ಬೇಡಿಕೆ ಈಡೇರಿಸಲು ಭರವಸೆ ನೀಡಿದ ಬಳಿಕ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಬಿನ್ ಸಿಬ್ಬಂದಿಯ ಒಂದು ವಿಭಾಗ ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡಿದೆ.ಹೀಗಾಗಿ ಪ್ರತಿಭಟನಾನಿರತ ಸಿಬ್ಬಂದಿ ಸದಸ್ಯರು ಮತ್ತೆ ಕರ್ತವ್ಯಕ್ಕೆ ಸೇರಲು ನಿರ್ಧರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಯಾನ ಸಂಸ್ಥೆಯ ವಕ್ತಾರರು ಸಿಬ್ಬಂದಿಯೊಂದಿಗೆ ನಡೆದ ಸಂಧಾನ ಸಭೆ ಯಶಶ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ವಜಾ ಆದೇಶ ಹಿಂಪಡೆಯಲಾಗಿದೆ. ಎಲ್ಲಾ ಉದ್ಯೋಗಿಗಳು ಮತ್ತೆ ಕೆಲಸಕ್ಕೆ ಹಾಜರಾಗಲು ಸಮ್ಮತಿಸಿದ್ದಾರೆ ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಸಂಸ್ಥೆಯ ಆಂತರಿಕ ವಿಷಯದಿಂದ ನೂರಾರು ವಿಮಾನ ಸೇವೆ ರದ್ದು ಮಾಡಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ಆದ ತೊಂದರೆಗೆ ಕ್ಷಮೆ ಯಾಚಿಸುವುದಾಗಿ ಅವರು ತಿಳಿಸಿದ್ದಾg.