ಏರ್‌ ಇಂಡಿಯಾ ಮೇಲೆ ಸೈಬರ್‌ ದಾಳಿ: ಪ್ರಯಾಣಿಕರ ದಾಖಲೆ ಸೋರಿಕೆ

ದೆಹಲಿ, ಮೇ ೨೨- ಏರ್ ಇಂಡಿಯಾ ಸೇರಿದಂತೆ ಜಾಗತಿಕ ವಿಮಾನಯಾನ ಸಂಸ್ಥೆಗಳ ಮೇಲೆ ಸೈಬರ್ ದಾಳಿ ನಡೆಸಲಾಗಿದ್ದು, ಈ ವೇಳೆ ಸುಮಾರು 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವುದು ಆತಂಕ ತಂದೊಡ್ಡಿದೆ. ಲಕ್ಷಾಂತರ ಪ್ರಯಾಣಿಕರ ಕ್ರೆಡಿಟ್ ಕಾರ್ಡ್ ಮಾಹಿತಿ ಸೇರಿದಂತೆ ವೈಯಕ್ತಿಕ ವಿವರಗಳು ಸೋರಿಕೆಯಾಗಿದೆ. ಏರ್ ಇಂಡಿಯಾ ಮಾತ್ರವಲ್ಲದೆ ಸೈಬರ್ ದಾಳಿಯು ಮಲೇಷ್ಯಾ ಏರ್ ಲೈನ್ಸ್ , ಫಿನ್ನೈರ್, ಸಿಂಗಾಪುರ್ ಏರ್ ಲೈನ್ಸ್, ಲುಫ್ಥಾನ್ಸ ಮತ್ತು ಕ್ಯಾಥೆ ಪೆಸಿಫಿಕ್ ನಂಥ ಇತರ ವಿಮಾನಯಾನ ಸಂಸ್ಥೆಗಳ ಮೇಲೂ ದಾಳಿ ನಡೆದಿದೆ

ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಸರ್ವರ್ ನಿಂದ ಸುಮಾರು 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದ್ದು, 2011ರ ಆಗಸ್ಟ್ 26ರಿಂದ 2021ರ ಫೆಬ್ರವರಿ 3ರವರೆಗೆ ಈ ದಾಖಲೆಗಳು ಸೋರಿಕೆಯಾಗಿದೆ ಎಂದು ವರದಿ ತಿಳಿಸಿದೆ. ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಜವಾಬ್ದಾರಿಯನ್ನು ಹೊಂದಿರುವ ತನ್ನ “ಸಿಟಾ ಪಿಎಸ್‌ಎಸ್ ಸರ್ವರ್” ಮೇಲೆ ಅತ್ಯಾಧುನಿಕ ಸೈಬರ್‌ ದಾಳಿಗೆ ಒಳಗಾಗಿದ್ದು ಹೀಗಾಗಿ ದಾಖಲೆಗಳ ಸೋರಿಕೆಯಾಗಿದೆ. ಡೇಟಾ ಸೋರಿಕೆಯೂ ವರದಿಯಾದ ಕೂಡಲೇ ತಕ್ಷಣದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಅದರೂ ಯಾವುದೇ ನಷ್ಟವಾಗದಂತೆ ಪ್ರಯಾಣಿಕರು ತಮ್ಮ ಪಾಸ್‌ವರ್ಡ್‌ಗಳು ಮತ್ತು ಇತರ ಅಗತ್ಯ ವಿವರಗಳನ್ನು ಬದಲಾಯಿಸುವಂತೆ ಸಂಸ್ಥೆ ಸೂಚಿಸಿದೆ.

“ನಾವು ಮತ್ತು ನಮ್ಮ ಡೇಟಾ ಪ್ರೊಸೆಸರ್ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇದ್ದೇವೆ. ಪ್ರಯಾಣಿಕರು ತಮ್ಮ ವೈಯಕ್ತಿಕ ಡೇಟಾದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅನ್ವಯವಾಗುವಲ್ಲೆಲ್ಲಾ ಪಾಸ್‌ವರ್ಡ್‌ಗಳನ್ನು ಬದಲಾಯಿಸಿಕೊಳ್ಳಬೇಕು” ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ದಾಳಿಯಲ್ಲಿ ಪ್ರಯಾಣಿಕರ ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ಮಾಹಿತಿ, ಪಾಸ್‌ಪೋರ್ಟ್ ವಿವರಗಳು, ಟಿಕೆಟ್ ಮಾಹಿತಿ, ಕ್ರೆಡಿಟ್ ಕಾರ್ಡ್ ಡೇಟಾದಂತಹ ವಿವರಗಳು ಸೋರಿಕೆಯಾಗಿವೆ. ವಿಧಿವಿಜ್ಞಾನ ವಿಶ್ಲೇಷಣೆಯ ಮೂಲಕ ಅತ್ಯಾಧುನಿಕತೆಯ ಮಟ್ಟ ಮತ್ತು ವ್ಯಾಪ್ತಿಯನ್ನು ಕಂಡುಹಿಡಿಯಲಾಗುತ್ತಿದೆ. ಘಟನೆಯ ನಂತರ ವ್ಯವಸ್ಥೆಯೊಳಗೆ ಯಾವುದೇ ಅನಧಿಕೃತ ಚಟುವಟಿಕೆ ಪತ್ತೆಯಾಗಿಲ್ಲ ಎಂದು ಸಿಟಾ ದೃಢಪಡಿಸಿದೆ.ಏರ್ ಇಂಡಿಯಾವು ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ನಿಯಂತ್ರಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದೆ. ಅದರ ಜವಾಬ್ದಾರಿಗಳಿಗೆ ಅನುಗುಣವಾಗಿ ಘಟನೆಯ ಬಗ್ಗೆ ಅವರಿಗೆ ತಿಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.