
ಗುರುಮಠಕಲ:ಮೇ.19:ಯಾದಗಿರಿ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಮಾನ 40 – 44 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಮುಂದಿನ ಹಲವಾರು ದಿನಗಳ ಕಾಲ ಇದೇ ಸ್ಥಿತಿ ಅಥವಾ ಇನ್ನೂ ಹೆಚ್ಚಿನ ತಾಪಮಾನ ಇರಲಿದೆ ಎಂದು ಕೇಂದ್ರ ಡಿಡಿಎಂಎಸ್ ನಿಂದ ನಿರಂತರವಾಗಿ ನಾಗರಿಕರಿಗೆ ಮೆಸೇಜ್ ಕಳುಹಿಸಲಾಗುತ್ತಿದೆ. ಇದು ಜಿಲ್ಲೆಯ ಜನರನ್ನು ತಲ್ಲಣಗೊಳಿದೆ. ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದಿಂದಾಗಿ ಬಹುತೇಕ ದುಡಿಯುವ ಜನರು, ಅಶಕ್ತರು, ರೋಗಿಗಳು, ವೃದ್ದರು, ಮಕ್ಕಳು, ಗರ್ಭಿಣಿ ಬಾಣಂತಿಯರು ಸೇರಿದಂತೆ ಸಾಮಾನ್ಯ ಜನರ ಆರೋಗ್ಯ ಹದಗೆಡಲು ಇದೂ ಒಂದು ಕಾರಣವಾಗುತ್ತಿದೆ.
ಆದ್ದರಿಂದ ಜಿಲ್ಲಾಡಳಿತವು, ವಿವಿಧ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಿಗೆ ಹಾಗೂ ಸಂತೆಗಳಿಗೆ ಬರುವ ನಾಗರಿಕರು ಸೇರಿದಂತೆ ಜನಸಾಮಾನ್ಯರ ಆರೋಗ್ಯ ಕಾಪಾಡುವ ಕುರಿತು ಈ ಕೆಳಗಿನಂತೆ ಸೂಕ್ತವಾದ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಮ್ಮ ಪಕ್ಷ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) (ಎಸ್ ಯುಸಿಐ (ಸಿ) ) ಯಾದಗಿರಿ ಜಿಲ್ಲಾ ಸಂಘಟನಾ ಸಮಿತಿಯು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ
ಅಧ್ಯಕ್ಷರು, ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ (ಡಿಡಿಎಂಎಸ್) ಯಾದಗಿರಿ ಜಿಲ್ಲೆ, ಯಾದಗಿರಿ ಇವರನ್ನು ಒತ್ತಾಯಿಸುತ್ತದೆ.
ತುರ್ತು ಕ್ರಮಗಳು :
- ನಗರದ ಗಾಂಧಿ ಚೌಕ್ ನಲ್ಲಿ, ಸುಭಾಷ್ ಚೌಕ್ ನಲ್ಲಿ , ಹಳೆ ಬಸ್ ನಿಲ್ದಾಣದಲ್ಲಿ ಮತ್ತು ಅದರ ಮುಂಭಾಗದಲ್ಲಿ, ಹೊಸ ಬಸ್ ನಿಲ್ದಾಣದಲ್ಲಿ ಮತ್ತು ಅದರ ಮುಂಭಾಗದಲ್ಲಿ, ರೈಲು ನಿಲ್ದಾಣದಲ್ಲಿ ಮತ್ತು ಅದರ ಮುಂಭಾಗದಲ್ಲಿ, ಹೊಸಳ್ಳಿ ಕ್ರಾಸ್ ನಲ್ಲಿ, ಬಸವೇಶ್ವರ ಚೌಕ್ ನಲ್ಲಿ , ಜಿಲ್ಲಾಡಳಿತ ಭವನದ (ಮಿನಿ ವಿಧಾನ ಸೌಧ) ಮುಂಭಾಗದಲ್ಲಿ, ಆ ಕಟ್ಟಡದಲ್ಲಿ ಇರುವ ಎಲ್ಲಾ ಇಲಾಖೆಗಳ ಕಚೇರಿಗಳಲ್ಲಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ತಂಪಾದ ಶುದ್ಧವಾದ ಕುಡಿಯುವ ನೀರಿನ ಅರವಂಟಿಗೆ ವ್ಯವಸ್ಥೆ ಮಾಡಬೇಕು. ಅದೇ ರೀತಿಯಲ್ಲಿ ಶಹಾಪುರ ಸುರಪುರ ಗುರುಮಠಕಲ್, ವಡಗೇರಿ ಮತ್ತು ಹುಣಸಗಿ ಸೇರಿದಂತೆ ಜನರು ಸೇರುವ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
- ಕೆಲಸ ಕಾರ್ಯಗಳಿಗೆ ಜನರು ಬಂದು ಸೇರುವ ನಗರದ ವಿವಿಧ ಸ್ಥಳಗಳಲ್ಲಿ ನೆರಳಿನ ವ್ಯವಸ್ಥೆ ಮಾಡಬೇಕು.
- ರಸ್ತೆಗಳು ಕಾದು ಕೆಂಡವಾಗಿದ್ದು ತಾಪಮಾನ ಹೆಚ್ಚಿಸುತ್ತಿವೆ. ಆದ್ದರಿಂದ ಜನರು ಕಾಲು ನಡಿಗೆಯಲ್ಲಿ ತಿರುಗಾಡುವ ಸುಭಾಷ್ ಚೌಕ್ ರಸ್ತೆಗಳು, ಹಳೆ ಬಸ್ ನಿಲ್ದಾಣದ ಮುಂಭಾಗದ ರಸ್ತೆ, ರೈಲು ನಿಲ್ದಾಣ ರಸ್ತೆ, ಗಾಂಧಿ ಚೌಕ್ ರಸ್ತೆ, ಬಸವೇಶ್ವರ ಚೌಕ್, ತಹಸೀಲ್ದಾರ್ ಕಚೇರಿ- ಕೋರ್ಟ್ ಮುಂಭಾಗ ರಸ್ತೆಗಳಿಗೆ ಪ್ರತಿ ದಿನ ಮದ್ಯಾಹ್ನ ಮತ್ತು ಸಂಜೆ ಎರಡು ಹೊತ್ತು ನೀರು ಸಿಂಪಡಿಸಿ ಬಿಸಿಲಿನ ತಾಪಮಾನ ಕಡಿಮೆ ಮಾಡಬೇಕು.
- ಯಾದಗಿರಿ ನಗರವೂ ಸೇರಿದಂತೆ ಜಿಲ್ಲೆಯ ಇತರ ನಗರ ಪಟ್ಟಣ ಹಾಗೂ ಗ್ರಾಮಗಳಲ್ಲಿ ಪದೇ ಪದೇ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಈ ಕುರಿತು ಕೂಡಲೇ ಕ್ರಮವಹಿಸಿ ಸಂಬಂಧಪಟ್ಟ ಇಲಾಖೆಯಿಂದ ನಿರಂತರ ವಿದ್ಯುತ್ ಸರಬರಾಜು ಮಾಡಿದರೆ, ಬಿಸಿಲಿನ ತಾಪಮಾನ ಕಡಿಮೆ ಮಾಡಿಕೊಳ್ಳಲು ನಾಗರಿಕರು ತಾವೇ ಸ್ವಯಂ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಿಕೊಡಿ.
- ಜಿಲ್ಲಾ ತಾಲೂಕು ಮತ್ತು ಪಿಎಚ್ ಸಿ ಗಳಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ಸಹಿತ ಅಗತ್ಯ ತುರ್ತು ಚಿಕಿತ್ಸೆ ಮತ್ತು ಸಮರ್ಪಕವಾಗಿ ಔಷಧಿಗಳು ದೊರೆಯುವಂತೆ ಮಾಡಿ.
- ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ/ ಜಿಲ್ಲಾಡಳಿತ/ ನಗರ ಸಭೆಗಳು ಬಿಸಿಲಿನ ತಾಪಮಾನ ಅದನ್ನು ನಿಗ್ರಹಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ಮತ್ತು ನಾಗರಿಕರು ಸ್ವಯಂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಹಾಗೂ ನಗರದಲ್ಲಿ ದ್ವನಿವರ್ಧಕ ಮೂಲಕ ಮಾಹಿತಿಗಳನ್ನು ನೀಡಬೇಕು.
- ಬಿಸಿಲಿನ ತಾಪಮಾನ ಹೆಚ್ಚು ಇದ್ದರೂ ಯಾದಗಿರಿ ನಗರ ಸೇರಿದಂತೆ ಶಹಾಪುರ ಮತ್ತಿತರ ನಗರಗಳ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಹಾಕಿ ವಾಹನ ನಿಲ್ಲಿಸುವುದನ್ನು ಕೂಡಲೇ ನಿಲ್ಲಿಸಬೇಕು. ಸಿಗ್ನಲ್ ಹಾಕಿ ವಾಹನ ನಿಲ್ಲಿಸುವುದೇ ಆದರೆ ಎಲ್ಲಾ ಸಿಗ್ನಲ್ ಸ್ಥಳಗಳಲ್ಲಿ ನಿಲ್ಲುವ ವಾಹನಗಳು ಮತ್ತು ವಾಹನ ಸವಾರರಿಗೆ ಸಮರ್ಪಕವಾಗಿ ನೆರಳಿನ ವ್ಯವಸ್ಥೆ ಮಾಡಬೇಕು.
- ಬಸ್ ಗಳು ಕಾದು ಕೆಂಡವಾಗುತ್ತಿದ್ದು ಬಸ್ ಪ್ರಯಾಣ ಯಾತನಾಮಯವಾಗುತ್ತಿದೆ. ಆದ್ದರಿಂದ ಪ್ರತಿ ದಿನ ಬಸ್ ಗಳಿಗೆ ನೀರು ಸಿಂಪಡಿಸಿ ತಂಪಾಗಿಸಲು ಕ್ರಮ ಕೈಗೊಳ್ಳಬೇಕು. ಇತರ ಇತ್ಯಾದಿ ಕ್ರಮಗಳು
ಒಟ್ಟಾರೆ ಜಿಲ್ಲೆಯಲ್ಲಿ ಏರುತ್ತಿರುವ ಬಿಸಿಲಿನ ತಾಪಮಾನ ಅದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹಾಗೂ ನಾಗರಿಕರ ಮೇಲಾಗುವ ಇತರ ಗಂಭೀರ ಪರಿಣಾಮಗಳನ್ನು ನಿರ್ವಹಿಸಲು ಈ ಮೇಲಿನ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಾವು ಸಂಬಂಧಪಟ್ಟ ಇಲಾಖೆ (ಆರೋಗ್ಯ, ನಗರ ಸಭೆ, ಪೆÇಲೀಸ್, ಕಂದಾಯ, ಸಾರಿಗೆ, ಇತ್ಯಾದಿ) ಅಧಿಕಾರಿಗಳ ಮೂಲಕ ಕ್ರಮ ಜರುಗಿಸಬೇಕೆಂದು ನಮ್ಮ ಪಕ್ಷ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಎಸ್ ಯುಸಿಐ(ಸಿ) ಜಿಲ್ಲಾಡಳಿತವನ್ನು ಒತ್ತಾಯಿಸಿದೆ.