ಏರಿಯಾದಲ್ಲಿ ಹವಾ ಸೃಷ್ಟಿಗಾಗಿ ಸ್ನೇಹಿತನ ಇರಿದು ಕೊಲೆ

ಬೆಂಗಳೂರು,ನ.16-ಏರಿಯಾದಲ್ಲಿ ಹವಾ ಸೃಷ್ಟಿ ಮಾಡಬೇಕು ಎನ್ನುವ ಕಾರಣಕ್ಕೆ ಯುವಕನೋರ್ವ ಗೆಳೆಯನನ್ನೇ ಭೀಕರವಾಗಿ‌ ಕೊಲೆ ಮಾಡಿದ ದಾರುಣ ಘಟನೆ ಗಂಗಮ್ಮನಗುಡಿಯಲ್ಲಿ‌ ನಡೆದಿದೆ.
ಗಂಗಮ್ಮನಗುಡಿಯ ಕಾರ್ತಿಕ್ ಹತ್ಯೆಯಾದ ಯುವಕ. ಆತನ ಸ್ನೇಹಿತ ಅಶೋಕ್ ಹಾಗೂ ಆತನ ಸಹಚರರಿಂದ ಕೃತ್ಯ ನಡೆದಿದೆ.  ಹತ್ಯೆಯಾದ ಕಾರ್ತಿಕ್ ಹಾಗೂ ಹಂತಕ ಅಶೋಕ್ ಒಂದೇ ಗ್ಯಾಂಗ್​ ನ ಸದಸ್ಯರು. ಇಬ್ಬರ ಮಧ್ಯೆ ಹವಾ ಸೃಷ್ಟಿ ಮಾಡುವ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಲೇ ಇತ್ತು.
ನಿನ್ನೆ ಮಧ್ಯಾಹ್ನ ಎಲ್ಲರೂ ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ ಏರಿಯಾದಲ್ಲಿ‌ ಯಾರು ಹವಾ ಇರಬೇಕು ಎನ್ನುವ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಕೊನೆಗೆ ತರಕಾರಿ ಕತ್ತರಿಸುವ ಚಾಕುವಿನಿಂದ ಕಾರ್ತಿಕ್​​ನನ್ನು ಅಶೋಕ್ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಅಶೋಕ್ ಮತ್ತು ಟೀಂ ಸದ್ಯ ತಲೆಮರಿಸಿಕೊಂಡಿದೆ. ಈ ತಂಡ ಈಗಾಗಲೇ ನಗರವನ್ನು ಬಿಟ್ಟು ಹೋಗಿರುವ ಶಂಕೆ ಇದೆ. ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.