ಏಮ್ಸ್ ಹೋರಾಟಕ್ಕೆ ಬೆಂಬಲಿಸಿ ೬೫೦೦ ಜನರಿಂದ ರಕ್ತ ಸಹಿ

ರಾಯಚೂರು.ಜು.೨೦- ಏಮ್ಸ್ ಹೋರಾಟ ಸಮಿತಿಯ ನಿರಂತರ ಧರಣಿ ಸತ್ಯಾಗ್ರಹ ೬೮ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿವರೆಗೂ ೬೫೦೦ ಜನರು ರಕ್ತದಿಂದ ಸಹಿ ಮಾಡಿ, ಏಮ್ಸ್‌ಗೆ ಒತ್ತಾಯಿಸಿದ್ದಾರೆ.
ನಗರದ ಕ್ರೀಡಾಂಗಣದಲ್ಲಿ ಕಳೆದ ೬೯ ದಿನದಿಂದ ಏಮ್ಸ್ ಹೋರಾಟ ನಡೆಯುತ್ತಿದೆ. ಪ್ರಾದೇಶಿಕ ಅಸಮಾತೋಲನಾ ನಿವಾರಣೆಗಾಗಿ ರಾಯಚೂರಿನಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸ್ಥಾಪಿಸಲು ಒತ್ತಾಯಿಸಿ ಅನಿರ್ದಿಷ್ಠ ಧರಣಿ ಸತ್ಯಾಗ್ರಹ ಅಮೃತ ಮಹೋತ್ಸವಕ್ಕೆ ಹತ್ತಿರವಾಗುತ್ತಿದೆ. ಐಐಟಿ ಮಾದರಿಯಲ್ಲಿ ಹೋರಾಟ ತೀವ್ರಗೊಳಿಸಲಾಗುತ್ತದೆ. ಇತ್ತೀಚಿಗಷ್ಟೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಭಟನಾ ಸ್ಥಳಕ್ಕೆ ತೆರಳಿ, ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆಗೆ ಸಮಯಾವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಈ ಭರವಸೆ ನೀಡಿ ತಿಂಗಳು ಕಳೆಯುತ್ತಿದ್ದರೂ, ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆಗೆ ಯಾವುದೇ ಕಾಲಾವಕಾಶ ದೊರೆತಿಲ್ಲ.
ಕಳೆದ ೬೯ ದಿನಗಳಿಂದ ನಿರಂತರ ಧರಣಿ ಸತ್ಯಾಗ್ರಹ ಮುಂದುವರೆದಿದೆ. ಸ್ಥಳೀಯ ಜನಪ್ರತಿನಿಧಿಗಳಿಂದ ಜಿಲ್ಲೆಗೆ ಏಮ್ಸ್ ದೊರೆಯಬೇಕೆಂಬ ಆಸಕ್ತಿಯ ಕೊರತೆಯಿಂದ ಹೋರಾಟ ಇಂದು ಕೇವಲ ಸಂಘ-ಸಂಸ್ಥೆಗಳಿಗೆ ಮಾತ್ರ ಸೀಮಿತವಾಗುವಂತಾಗಿದೆ. ಚುನಾವಣೆಗಳಲ್ಲಿ ಏಮ್ಸ್ ಬಗ್ಗೆ ಹತ್ತಾರು ಭರವಸೆ ನೀಡಿದ ಯಾವ ನಾಯಕರೂ ಹೋರಾಟದತ್ತ ಸುಳಿಯುತ್ತಿಲ್ಲ. ವಿರೋಧ ಪಕ್ಷದಲ್ಲಿರುವಾಗ ಒಂದು ನಡೆ, ಅಧಿಕಾರಕ್ಕೆ ಬಂದ ನಂತರ ಮತ್ತೊಂದು ನಡೆ ಎನ್ನುವ ರೀತಿಯಲ್ಲಿ ಇಲ್ಲಿಯ ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ. ಒಟ್ಟಾರೆಯಾಗಿ ಏಮ್ಸ್ ಹೋರಾಟ ಸುಧೀರ್ಘವಾಗಿ ಮುಂದುವರೆದಿದ್ದು, ೭೫ ನೇ ದಿನ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸಿದ್ಧತೆಯೂ ನಡೆದಿದೆ.