ಏಮ್ಸ್ ಮಂಜೂರಿಗೆ ಆಗ್ರಹಿಸಿ ಸಿಎಂಗೆ ಹೋರಾಟ ಸಮಿತಿ ನಿಯೋಗ ಮನವಿ

ಜಿಲ್ಲೆಗೆ ಏಮ್ಸ್ : ಪ್ರಧಾನಮಂತ್ರಿಗಳಿಗೆ ಪತ್ರ – ಯಡಿಯೂರಪ್ಪ ಭರವಸೆ
ರಾಯಚೂರು.ಮಾ.೨೫- ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರಿ ಮಾಡುವಂತೆ ಪ್ರಧಾನಮಂತ್ರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದರು.
ಇಂದು ರಾಯಚೂರು ಏಮ್ಸ್ ಹೋರಾಟ ಸಮಿತಿ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಜಿಲ್ಲೆಗೆ ಏಮ್ಸ್ ನೀಡುವಂತೆ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಕೋರುತ್ತೇನೆ. ಅಲ್ಲದೇ, ಕೇಂದ್ರ ಮಂತ್ರಿಗಳಾದ ಪ್ರಹ್ಲಾದ್ ಜೋಷಿ ಹಾಗೂ ಸದಾನಂದಗೌಡ ಅವರೊಂದಿಗೆ ಈ ಕುರಿತು ಚರ್ಚಿಸಿ, ಎಲ್ಲಾ ಮುಖ್ಯ ಸಂಸ್ಥೆಗಳನ್ನು ಧಾರವಾಡ ಜಿಲ್ಲೆಯಲ್ಲೇ ಸ್ಥಾಪಿಸಿದರೇ, ಹೇಗೆ? ಈ ಸಂಬಂಧಪಟ್ಟಂತೆ ಇತರೆ ಜಿಲ್ಲೆಗಳಿಗೂ ನ್ಯಾಯ ಒದಗಿಸಬೇಕು ಎನ್ನುವ ಬಗ್ಗೆಯೂ ಚರ್ಚಿಸುವ ಭರವಸೆ ನೀಡಿದರು.
ಮನವಿ ನೀಡುವ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಅವರು, ಈ ಹಿಂದೆ ನಂಜುಂಡಪ್ಪ ವರದಿಯನ್ವಯ ಐಐಟಿ ಜಿಲ್ಲೆಗೆ ನೀಡಬೇಕಾಗಿತ್ತು. ಆದರೆ, ಇದು ವಂಚಿತಗೊಂಡಿದ್ದು, ಈಗ ಏಮ್ಸ್ ನೀಡುವ ಮೂಲಕ ಇದನ್ನು ಸರಿಪಡಿಸುವ ಭರವಸಯಂತೆ ಜಿಲ್ಲೆಗೆ ಏಮ್ಸ್ ಮಂಜೂರಿ ಮಾಡುವಂತೆ ಕೋರಿದರು. ಈ ಕುರಿತು ತಾವು ಕೇಂದ್ರದೊಂದಿಗೆ ಸಂಪರ್ಕಿಸಿ, ಏಮ್ಸ್ ಜಿಲ್ಲೆಗೆ ಮಂಜೂರಾಗುವಂತೆ ಮಾಡಲು ಮುಖ್ಯಮಂತ್ರಿ ಬಳಿ ಕೋರಿದರು.
ರಾಯಚೂರು ಏಮ್ಸ್ ಹೋರಾಟ ಸಮಿತಿ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ರಾಯಚೂರು ಜಿಲ್ಲೆಯೂ ಅನೇಕ ರಂಗಗಳಲ್ಲಿ ಬಹಳಷ್ಟು ಹಿಂದುಳಿದೆ. ಪ್ರಾದೇಶಿಕ ಅಸಮಾತೋಲನ ನಿವಾರಣೆಗಾಗಿ ರಚಿಸಿದ ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ ಐಐಟಿ ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಇದಕ್ಕಾಗಿ ಜಿಲ್ಲೆಯಲ್ಲಿ ಸುಧೀರ್ಘ ಹೋರಾಟ ನಡೆಸಿದ್ದರ ಫಲವಾಗಿ ೧೮ ಅಕ್ಟೋಬರ್ ೨೦೧೫ ರಂದು ಕಲ್ಬುರ್ಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಐಐಟಿ ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಪತ್ರ ಕಳುಹಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದರು.
ಅದರಂತೆ ೫-೧೨-೨೦೧೫ ರಂದು ಅಧಿಕೃತ ಶಿಫಾರಸ್ಸು ಪತ್ರ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ, ನಂತರದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳುಹಿಸಿದ ಶಿಫಾರಸ್ಸಿನಲ್ಲಿ ರಾಯಚೂರಿನೊಂದಿಗೆ ಧಾರವಾಡ ಮತ್ತು ಮೈಸೂರು ಮೂರು ಹೆಸರು ಶಿಫಾರಸ್ಸು ಮಾಡಿ, ಪತ್ರ ಕಳುಹಿಸುವ ಮೂಲಕ ನಮ್ಮ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ. ಇದರ ದುರ್ಲಾಭ ಪಡೆದ ಧಾರವಾಡದ ಪ್ರಭಾವಿ ರಾಜಕೀಯ ಶಕ್ತಿಗಳಾದ ಅಂದಿನ ಸಚಿವರಾದ ಅನಂತಕುಮಾರ, ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಷಿ ಅವರು ಕಾಂಗ್ರೆಸ್ ಪಕ್ಷದ ಅಂದಿನ ಸಚಿವರಾದ ದೇಶಪಾಂಡೆ ಅವರು ಕೂಡಿ ಕೇಂದ್ರದ ಮೇಲೆ ಒತ್ತಡವೇರಿ, ಐಐಟಿ ಧಾರವಾಡಕ್ಕೆ ಕೊಂಡೊಯ್ಯಲಾಯಿತು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಮ್ಮದೇ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಕ್ಕೆ ತಾವೇ ಧಿಕ್ಕರಿಸಿ, ಜಿಲ್ಲೆಗೆ ಮಹಾ ವಂಚನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಏಮ್ಸ್ ರಾಯಚೂರು ಜಿಲ್ಲೆಗೆ ಮಂಜೂರು ಮಾಡುವಂತೆ ಕೋರುತ್ತೇವೆ. ಐಐಟಿ ವಂಚನೆಯಿಂದ ಅನ್ಯಾಯಕ್ಕೊಳಗಾದ ಜಿಲ್ಲೆಗೆ ಏಮ್ಸ್ ಮೂಲಕ ನ್ಯಾಯ ಒದಗಿಸುವಂತೆ ಕೇಳಲಾಯಿತು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಂಚಾಲಕರಾದ ಡಾ. ಬಸವರಾಜ ಕಳಸಾ, ರವೀಂದ್ರ ಜಲ್ದಾರ್, ಅಶೋಕ ಜೈನ್, ಮೈತ್ರಿಕರ್, ಆನಂದ ಪಾಟೀಲ್, ಪತ್ರಕರ್ತ ವೆಂಕಟಸಿಂಗ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.