ಏಮ್ಸ್ ಮಂಜೂರಾತಿಗೆ ಪ್ರಧಾನಿಗೆ ಸುಖಾಣಿ ಮತ್ತೊಂದು ಪತ್ರ

ರಾಯಚೂರು.ನ.೧೭- ಜಿಲ್ಲೆಗೆ ಏಮ್ಸ್ ಮಂಜೂರಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪಾರಸಮಲ್ ಸುಖಾಣಿ ಅವರು ಮತ್ತೊಂದು ಪತ್ರ ಬರೆದಿದ್ದಾರೆ.
ಈಗಾಗಲೇ ೬ ಪತ್ರಗಳನ್ನು ಬರೆದು, ಏಮ್ಸ್ ಮಂಜೂರಾತಿಗೆ ಸಂಬಂಧಿಸಿ ಅವರು ಕೋರಿದ್ದಾರೆ. ರಾಯಚೂರು ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಹುಬ್ಬಳ್ಳಿ ಮತ್ತು ಕಲ್ಬುರ್ಗಿ ಜಿಲ್ಲೆಗಳಿಗೆ ಏರ್‌ಪೋರ್ಟ್, ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಜಯದೇವ ಉಪ ಕೇಂದ್ರ, ಕೇಂದ್ರೀಯ ವಿಶ್ವವಿದ್ಯಾಲಯ ಹೀಗೆ ಅನೇಕ ಯೋಜನೆಗಳು ನೀಡಲಾಗಿದೆ. ಇತ್ತೀಚಿಗಷ್ಟೇ ಅಸ್ತಿತ್ವಕ್ಕೆ ಬಂದ ಯಾದಗಿರಿ ಜಿಲ್ಲೆಗೆ ರೈಲ್ವೆ ಕೋಚ್ ನಿರ್ಮಾಣ ಘಟಕ ನೀಡಲಾಗಿದೆ. ಜಿಲ್ಲೆಯಲ್ಲಿ ನಾಯಕತ್ವದ ಕೊರತೆ ಮತ್ತು ಮಲತಾಯಿ ಧೋರಣೆ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಯೋಜನೆ ಮಂಜೂರಾತಿಯಲ್ಲಿ ಹಿಂದೇಟು ಹಾಕುತ್ತಿದೆ.
ಇದರಿಂದಾಗಿ ರಾಯಚೂರು ಜಿಲ್ಲೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ಹಿಂದುಳಿಯಲು ಕಾರಣವಾಗಿದೆ. ನಂಜುಂಡಪ್ಪ ಸಮಿತಿ ವರದಿಯನ್ವಯ ಐಐಟಿ ಜಿಲ್ಲೆಯಲ್ಲಿ ಸ್ಥಾಪಿಸಬೇಕಾಗಿತ್ತು. ಆದರೆ, ಈ ಅವಕಾಶದಿಂದಲೂ ವಂಚಿತಗೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಅತ್ಯಂತ ಹಿಂದುಳಿದ ಈ ಜಿಲ್ಲೆಗೆ ಏಮ್ಸ್ ಮಂಜೂರಿ ಮಾಡುವಂತೆ ಕೋರಿದ್ದಾರೆ. ಏಮ್ಸ್ ಮಾತ್ರ ಪ್ರಾದೇಶಿಕ ಅಭಿವೃದ್ಧಿಯ ಸಮಾನತೆಯನ್ನು ಕಾಯ್ದುಕೊಳ್ಳಲು ಸಾಧ್ಯವೆಂದು ಉಲ್ಲೇಖಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರತಿಗಳನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಡಾ.ಶಿವರಾಜ ಪಾಟೀಲ್, ಕೆ.ಶಿವನಗೌಡ ನಾಯಕ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ ಅವರಿಗೆ ಕಳುಹಿಸಲಾಗಿದೆ.