ಏಮ್ಸ್ ನಿಯೋಗದಿಂದೆ ಚರ್ಚಿಸದಿದ್ದರೆ, ಸಿಎಂ ರಾಯಚೂರು ಭೇಟಿಗೂ ಅವಕಾಶವಿಲ್ಲ

ಜಿಲ್ಲೆಯ ಬಿಜೆಪಿ ಶಾಸಕರಿಂದ ‘ನರಸತ್ತ‘, ‘ಗುಲಾಮಗಿರಿ‘ ವರ್ತನೆ – ಆರೋಪ
ರಾಯಚೂರು.ಜು.೨೪- ಏಮ್ಸ್ ಹೋರಾಟ ಸಮಿತಿಯ ನಿಯೋಗ ಕರೆದು, ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ರಾಯಚೂರು ಏಕಮಾತ್ರ ಹೆಸರು ಶಿಫಾರಸ್ಸು ಮಾಡದಿದ್ದರೆ ಮುಖ್ಯಮಂತ್ರಿಯನ್ನು ಜಿಲ್ಲೆಗೆ ಬರಲು ಬಿಡುವುದಿಲ್ಲವೆಂದು ಏಮ್ಸ್ ಹೋರಾಟ ಸಮಿತಿಯ ಮುಖಂಡರಾದ ಬಸವರಾಜ ಕಳಸಾ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಳೆದ ೭೩ ದಿನಗಳಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ೯ ಸಾವಿರ ರಕ್ತದ ಸಹಿ ಮಾಡಲಾಗಿದೆ. ೭೫ ನೇ ದಿನಕ್ಕೆ ೧೦ ಸಾವಿರ ರಕ್ತದ ಸಹಿಗಳನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕಳುಹಿಸಲಾಗುತ್ತದೆ. ಆಡಳಿತರೂಢ ಸಂಸದರು, ಶಾಸಕರು ಹಾಗೂ ಮುಖ್ಯಮಂತ್ರಿಗಳಿಗೆ ಮಾನವಿಯತೆ ಇಲ್ಲವೆ?. ವಿದ್ಯಾರ್ಥಿಗಳು ತಮ್ಮ ರಕ್ತದೊಂದಿಗೆ ಸಹಿ ಮಾಡಿ, ೭೩ ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ, ಈ ಬಗ್ಗೆ ಕರೆದು ಚರ್ಚಿಸುವ ಕನಿಷ್ಠ ಕಾಳಜಿ ತೋರದಿರುವುದು ಇವರ ಜಿಲ್ಲೆಯ ಪರ ಧೋರಣೆಗೆ ನಿದರ್ಶನವಾಗಿದೆ.
ಐಐಟಿ ಹೋರಾಟದ ಸಂದರ್ಭದಲ್ಲಿ ರಸ್ತೆ ತಡೆ, ಟೈರ್‌ಗೆ ಬೆಂಕಿ ಇತ್ಯಾದಿ ಚಳುವಳಿಗಳಿಗೆ ಅನುಮತಿ ನೀಡುವ ಪೊಲೀಸರು ಈಗ ಈ ರೀತಿಯ ಚಳುವಳಿ ನಡೆಸಿದರೆ, ಎಫ್‌ಐಆರ್ ದಾಖಲಿಸುವುದಾಗಿ ಬೆದರಿಸುವ ಮಟ್ಟಕ್ಕೆ ಹೋರಾಟವನ್ನು ದಮನ ಮಾಡುತ್ತಿದ್ದಾರೆ. ನಾವು ಶಾಂತಿಯೊಂದಿಗೆ ಹೋರಾಟ ಮಾಡುತ್ತಿದ್ದೇವೆ. ಆದರೆ, ಈ ಶಾಂತಿಯ ಹೋರಾಟ ತಾಳ್ಮೆಯ ಕಟ್ಟೆ ಹೊಡೆದು, ತೀವ್ರಗೊಳ್ಳುವುದನ್ನು ತಡೆಯುವುದು ಸರ್ಕಾರದ ಕೈಯಲ್ಲಿದೆ. ಒಂದು ವರ್ಷದಿಂದ ಜಿಲ್ಲೆಗೆ ಬಾರದ ಮುಖ್ಯಮಂತ್ರಿಗಳು ಮುಂದೆ ರಾಯಚೂರಿಗೆ ಬರಬೇಕಾದರೆ, ಏಮ್ಸ್ ಹೋರಾಟ ಸಮಿತಿಯೊಂದಿಗೆ ಚರ್ಚಿಸಲೇಬೇಕು. ಇಲ್ಲದಿದ್ದರೆ, ಜಿಲ್ಲೆಗೆ ಬರಲು ಬಿಡುವುದಿಲ್ಲವೆಂದು ಎಚ್ಚರಿಸಿದರು.
ಪಾರಸಮಲ್ ಸುಖಾಣಿ ಅವರು ಕೇವಲ ಪ್ರಧಾನಿ,ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಐಐಟಿ ಮಾದರಿಯಲ್ಲಿ ಹೋರಾಟಕ್ಕೆ ಮುಂದಾಗುತ್ತಿಲ್ಲ. ಏಮ್ಸ್ ಹೋರಾಟದ ಬಗ್ಗೆ ತಾರಾನಾಥ ಶಿಕ್ಷಣ ಸಂಸ್ಥೆಯಲ್ಲಿ ಪ್ರಚಾರ ಮಾಡಲು ಅವಕಾಶ ನೀಡದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರಾಚಾರ್ಯರೊಂದಿಗೆ ಈ ಕುರಿತು ಚರ್ಚಿಸುವಾಗ ಸಂಸ್ಥೆಯ ಮುಖ್ಯಸ್ಥರು ಅನುಮತಿ ನೀಡುವವರೆಗೂ ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ಮಟ್ಟಕ್ಕೆ ಪರಿಸ್ಥಿತಿ ಇದೆ. ನಮ್ಮ ಹೋರಾಟಕ್ಕೆ ಬಾರದಿದ್ದರೂ, ಕನಿಷ್ಟ ಪ್ರಚಾರಕ್ಕೆ ಅವಕಾಶ ನೀಡುವಂತೆ ಕಾಲೇಜಿನ ಮುಖ್ಯಸ್ಥರಿಗೆ ಸುಖಾಣಿ ಅವರು ಸೂಚನೆ ನೀಡಬಹುದಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್. ಮಾರೆಪ್ಪ ಅವರು ಏಮ್ಸ್ ಹೋರಾಟ ೭೫ ದಿನಗಳಲ್ಲ, ೭೫೦ ದಿನಗಳಾದರೂ ಮುಂದೆ ಇದೆ ರೀತಿ ಮುಂದುವರೆಯುತ್ತದೆ. ಯಾರೆ ಬಂದು ಬೆದರಿಸಿದರೂ, ಈ ಹೋರಾಟ ನಿಲ್ಲುವುದಿಲ್ಲ. ಜನರು ಸ್ವಇಚ್ಛೆಯಿಂದ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಏಮ್ಸ್ ಸಂಸ್ಥೆ ಬಡವರಿಗಾಗಿ ಅಗತ್ಯವಾಗಿದೆ. ಏಮ್ಸ್‌ಗಾಗಿ ಎಲ್ಲಾ ಬಡವರು ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು. ವಿದ್ಯಾರ್ಥಿನಿಯರು ಸಹ ಈ ಹೋರಾಟಕ್ಕೆ ಭಾರೀ ಪ್ರಮಾಣದಲ್ಲಿ ಬೆಂಬಲ ನೀಡಿದ್ದಾರೆ.
ಅಶೋಕ ಜೈನ್ ಅವರು ಮಾತನಾಡುತ್ತಾ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಏಮ್ಸ್ ಹೋರಾಟಕ್ಕೆ ಬೆಂಬಲಿಸುವ ತಾಕತ್ತಿಲ್ಲವೆ?. ಆಡಳಿತರೂಢ ಬಿಜೆಪಿ ಪಕ್ಷ ಏಲ್ಲಿ, ಏನು ಕೇಳಿದರೆ ತಮ್ಮ ಪಕ್ಷದಿಂದ ಉಚ್ಛಾಟಿಸಲಾಗುತ್ತದೊ ಎನ್ನುವ ರೀತಿಯಲ್ಲಿ ವರ್ತಿಸಲಾಗುತ್ತಿದೆ. ಒಬ್ಬೆ ಒಬ್ಬ ಬಿಜೆಪಿ ಮುಖಂಡರು ಏಮ್ಸ್ ಹೋರಾಟದಲ್ಲಿ ಭಾಗವಹಿಸುತ್ತಿಲ್ಲ. ಶಾಸಕರಂತೂ ಏಮ್ಸ್ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ. ಉಸ್ತುವಾರಿ ಸಚಿವರು ವೇದಿಕೆ ಭೇಟಿ ನೀಡಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವ ಅವಕಾಶ ಕೊಡಿಸುವುದಾಗಿ ಹೇಳಿ ಹೋದವರು ಮತ್ತೆ ಇತ್ತ ಬಂದೆ ಇಲ್ಲ.
ಉಸ್ತುವಾರಿ ಸಚಿವರ ಭೇಟಿ ಸಂದರ್ಭದಲ್ಲಿ ಹೋರಾಟ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲು ಕೇಳಿದರೂ, ಮಾತನಾಡುವುದಿಲ್ಲವೆಂದು ನೇರವಾಗಿ ಹೇಳಿದರು. ಏಮ್ಸ್ ಬಗ್ಗೆ ‘ನರಸತ್ತ‘ ಮತ್ತು ‘ಗುಲಾಮಗಿರಿ‘ತನವನ್ನು ಪ್ರದರ್ಶಿಸುತ್ತಿದ್ದಾರೆ. ರಾಯಚೂರಿನ ಈ ಶಾಂತಿ ಹೋರಾಟವನ್ನು ಶಾಂತಿಭಂಗ ಹೋರಾಟ ಮಾಡದಿರುವಂತೆ ಮತ್ತು ಏಮ್ಸ್‌ನಿಂದಾಗಿ ಪ್ರತ್ಯೇಕ ರಾಜ್ಯ ಕೇಳುವಂತಹ ಪ್ರಸಂಗಕ್ಕೆ ದಾರಿ ಮಾಡದಿರುವಂತೆ ಅವರು ಎಚ್ಚರಿಸಿದರು. ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಜೆಡಿಎಸ್ ಅಧ್ಯಕ್ಷ ವಿರೂಪಾಕ್ಷಿ ಈ ಹೋರಾಟಕ್ಕೆ ಬೆಂಬಲ ನೀಡಲು ಮುಂದಾಗಬೇಕು. ವಿರೋಧ ಪಕ್ಷಗಳಾಗಿ ಜನರ ಹೋರಾಟಕ್ಕೆ ಬೆಂಬಲಿಸದಿದ್ದರೆ ಇವರ ನಿಲುವಿನ ಬಗ್ಗೆ ಜನ ಪ್ರಶ್ನಿಸಬೇಕಾಗುತ್ತದೆಂದರು.
ಈ ಸಂದರ್ಭದಲ್ಲಿ ವೆಂಕಟೇಶ, ಶ್ರೀನಿವಾಸ ಕಲವಲದೊಡ್ಡಿ ಉಪಸ್ಥಿತರಿದ್ದರು.