
ರಾಯಚೂರು,ಮಾ.೨೫- ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ( ಏಮ್ಸ್) ಸ್ಥಾಪನೆಯ ಘೋಷಣೆ ಮಾಡುವ ಮೂಲಕ ಹಿಂದುಳಿದ ರಾಯಚೂರು ಜಿಲ್ಲೆಗೆ ನ್ಯಾಯ ಒದಗಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಬಾಬುರಾವ್ ಅವರು ಆಗ್ರಹಿಸಿದ್ದಾರೆ.
ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿಗೆ ಆಗಮಿಸುತ್ತಿರುವ ಕೇಂದ್ರ ಗೃಹ ಮಂತ್ರಿ ಅಮೀತ ಶಾ ಅವರಿಗೆ ಮನವಿ ಮಾಡಿರುವ ಅವರು, ರಾಯಚೂರ ಜಿಲ್ಲೆಗೆ ಈಗಾಗಲೇ ಐಐಟಿ ಮತ್ತು ರಾಷ್ಟ್ರೀಯ ಜವಳಿ ಪಾರ್ಕ್ ಕೈ ತಪ್ಪಿವೆ. ಜನತೆ ಬೇಸರಗೊಂಡಿದ್ದಾರೆ. ಕೇಂದ್ರ ರಾಯಚೂರ ಜಿಲ್ಲೆ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಟೀಕಿಸಿದ್ದಾರೆ.
ಈ ಜಿಲ್ಲೆ ಶಿಕ್ಷಣ, ಆರೋಗ್ಯದಲ್ಲಿ ಹಿಂದಿದೆ. ಆರೋಗ್ಯ ಇಂಡಕ್ಸನಲ್ಲಂತೂ ಬಹಳಷ್ಟು ಕೆಳ ಮಟ್ಟದಲ್ಲಿದೆ. ಇಲ್ಲಿ ಅಪೌಷ್ಟಿಕತೆ ತಾಂಡವವಾಡುತ್ತಿರುವ ಕಾರಣ ಹುಟ್ಟುವ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿವೆ. ಅಕಾಲಿಕ ಸಾವನಪ್ಪುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆರೋಗ್ಯದ ಇಂಡಕ್ಸ ಸುಸ್ಥಿತಿಗೆ ಬರಲು, ನಿರುದ್ಯೋಗ ಅಳಿಯಲು, ವ್ಯಾಪಾರ ಚಡುವಟಿಕೆಗಳು ವೇಗ ಪಡೆಯಲು ಏಮ್ಸ್ ಸ್ಥಾಪನೆಯ ಅಗತ್ಯ ತುಂಬಾ ಇದೆ ಎಂದು ಗಮನಕ್ಕೆ ತಂದಿದ್ದಾರೆ.
ರಾಯಚೂರಲ್ಲಿ ಏಮ್ಸ್ ಸ್ಥಾಪನೆಗೆ ಬೇಕಾಗುವಷ್ಟು ಭೂಮಿ ಲಭ್ಯತೆ, ಎಡ ಬಲದಲ್ಲಿ ಕೃಷ್ಣ ತುಂಗಭದ್ರ ನದಿಗಳು ಹರಿಯುವ ಕಾರಣ ನೀರಿನ ಸೌಕರ್ಯವಿದೆ. ನಿರಂತರ ವಿದ್ಯುತ್‌ಗೆ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಉಷ್ಣ ವಿದ್ಯುತ್ ಸ್ಥಾಪರಗಳಿವೆ. ಸಂವಿಧಾನ ಪರಿಚ್ಛೆದ ,೩೭೧ ಜೆ ಸೌಲಭ್ಯ ಪಡೆಯುತ್ತಿದೆ. ನೀತಿ ಆಯೋಗದ ಆಕಾಂಕ್ಷಿ ಪಟ್ಟಿಯಲ್ಲಿದೆ ಎಂದು ಮಾಹಿತಿ ಒದಗಿಸಿದ್ದಾರೆ.
ಜನಪ್ರತಿನಿಧಿಗಳ ಒಮ್ಮತದ ಬೇಡಿಕೆಯೂ ಇದಾಗಿದ್ದು, ಏಮ್ಸ್ ಘೋಷಿಸುವ ಮೂಲಕ ರಾಯಚೂರ ಜಿಲ್ಲೆ ಜನರಿಗೆ ಸಿಹಿ ಸುದ್ದಿ ನೀಡಿ, ಅವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಲು ಕೋರಿದ್ದಾರೆ.ಏಮ್ಸ್ ಸ್ಥಾಪನೆಗೆ ಬೇಕಿರುವ ಎಲ್ಲ ಸವಲತ್ತುಗಳೂ ಇಲ್ಲಿವೆ ಎಂದು ತಿಳಿಸಿದ್ದಾರೆ.