ಏಮ್ಸ್ ಆಸ್ಪತ್ರೆಗೆ ಆಗ್ರಹಿಸಿ ಆ. 5ರಿಂದ ಅನಿರ್ಧಿಷ್ಟ ಹೋರಾಟ

ಕಲಬುರಗಿ,ಜೂ.27: ಭಾರತದಲ್ಲಿಯೇ ಅತ್ಯಂತ ದೊಡ್ಡದಾಗಿರುವ ನಗರದಲ್ಲಿನ ಸೇಡಂ ರಸ್ತೆಯಲ್ಲಿರುವ ಇಎಸ್‍ಐ ಆಸ್ಪತ್ರೆಯನ್ನು ಏಮ್ಸ್ ಆಸ್ಪತ್ರೆಯನ್ನಾಗಿ ಮೇಲ್ದರ್ಜೇಗೇರಿಸಬೇಕು. ಬೇಡಿಕೆಯನ್ನು ಪರಿಗಣಿಸದೇ ಹೋದಲ್ಲಿ ಆಗಸ್ಟ್ 5ರಿಂದ ಅನಿರ್ಧಿಷ್ಟ ಹೋರಾಟ ಆರಂಭಿಸಲಾಗುವುದು ಎಂದು ಇಎಸ್‍ಐ ಆಸ್ಪತ್ರೆ ದಿನಗೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಭಗವಾನ್ ಎ. ಭೋವಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಿ ಇಎಸ್‍ಐ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದ್ದು, ಪ್ರಧಾನಿಯವರು ಈ ಆಸ್ಪತ್ರೆಯನ್ನು ಏಮ್ಸ್‍ಗೆ ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿದರು.
ಈಗಿರುವ ಇಎಸ್‍ಐ ಆಸ್ಪತ್ರೆ ಬಹುದೊಡ್ಡದಿದ್ದರೂ ಸಹ ಆಸ್ಪತ್ರೆಯಲ್ಲಿ ಶೇಕಡಾ 40ರಷ್ಟು ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಇನ್ನೂ ಶೇಕಡಾ 60ರಷ್ಟು ಹುದ್ದೆಗಳು ಖಾಲಿ ಇವೆ. ಯಾವುದೇ ಮಹತ್ವದ ಶಸ್ತ್ರ ಚಿಕಿತ್ಸೆಗಳನ್ನು ಮಾಡುವುದಿಲ್ಲ. ಮಹತ್ವದ ಗುಳಿಗೆ ಹಾಗೂ ಔಷಧಿಗಳನ್ನು ಆಸ್ಪತ್ರೆಯಲ್ಲಿ ಕೊಡದೇ ಚೀಟಿ ಬರೆದುಕೊಟ್ಟು ಹೊರಗಿನಿಂದ ತರಿಸುತ್ತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆಯನ್ನು ಸುಧಾರಣೆ ಮಾಡಬೇಕು. ಎಲ್ಲ ತರಹದ ಕೆಲಸಗಾರರ ಸಂಖ್ಯೆಯನ್ನು ಹೆಚ್ಚಿಸಬೇಕು. ಸದ್ಯ ಭದ್ರತಾ ಸಿಬ್ಬಂದಿಗಳು ಮಾಜಿ ಸೈನಿಕರಿದ್ದಾರೆ. ಅವರ ನೇಮಕ ರದ್ದುಗೊಳಿಸಬೇಕು. ಯಾರೇ ಆಗಿರಲಿ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು. ಎತ್ತರ ಹುದ್ದೆಗೆ ತಕ್ಕಂತೆ ಇರಬೇಕು ಎಂದು ಹೇಳಿದ ಅವರು, ಭದ್ರತಾ ಸಿಬ್ಬಂದಿಗಳನ್ನು 350ರಿಂದ 400 ಸಂಖ್ಯೆಗೆ, ವಿದ್ಯುತ್ ವಿಭಾಗದಲ್ಲಿ 250ರಿಂದ 300 ಸಂಖ್ಯೆಗೆ, ಸ್ವಚ್ಛತಾ ಸಿಬ್ಬಂದಿಗಳನ್ನು 950ರಿಂದ 1000 ಸಂಖ್ಯೆಗೆ, ಉದ್ಯಾನವನದ ಸಲುವಾಗಿನ ಸಿಬ್ಬಂದಿಗಳನ್ನು 45ರಿಂದ 50 ಜನಕ್ಕೆ, ನರ್ಸಿಂಗ್ 350ರಿಂದ 500 ಜನಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಆಸ್ಪತ್ರೆಯಲ್ಲಿ ಒಳಗಡೆ ಹಾಗೂ ಹೊರಗಡೆ ಶುದ್ಧ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಬೇಕು. ಆಸ್ಪತ್ರೆಯೊಳಗೆ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ ಅವರು, ಆಸ್ಪತ್ರೆಯ ಡೀನ್ ತೀರಸಾಗರ್ ಅವರು ಅಭಿವೃದ್ಧಿಗಾಗಿ ಕೆಲಸಗಾರರನ್ನು ಹೆಚ್ಚಿಸದೇ ಕಡಿಮೆ ಮಾಡುತ್ತಿದ್ದಾರೆ. ಕಡಿಮೆ ಸಂಖ್ಯೆಯ ಕಾರ್ಮಿಕರಿಂದ ಹೆಚ್ಚಿನ ಕೆಲಸ ಮಾಡಿಸಿ ಟೆಂಡರದಾರರೊಂದಿಗೆ ಸೇರಿ ಹಣವನ್ನು ಸಹ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಏಮ್ಸ್ ಆಸ್ಪತ್ರೆಯನ್ನಾಗಿ ಮಾಡಿದರೆ ಕಿಡ್ನಿ, ಹೃದಯಾಘಾತ, ಲಿವರ್, ಕ್ಯಾನ್ಸರ್, ಬ್ರೇನ್ ಮುಂತಾದ ಮಹತ್ವದ ಶಸ್ತ್ರ ಚಿಕಿತ್ಸೆಗಳನ್ನು ಕೈಗೊಳ್ಳಬಹುದಾಗಿದೆ. ಇದರಿಂದಾಗಿ ಕನಿಷ್ಠ 14000ದಿಂದ 15 ಸಾವಿರಕ್ಕೂ ಮೇಲ್ಪಟ್ಟು ಕಾರ್ಮಿಕರು ಕೆಲಸ ಮಾಡಬಹುದಾಗಿದೆ. ಅತ್ಯುನ್ನತ ವೈದ್ಯಕೀಯ ಸೌಲಭ್ಯಗಳು ದೊರೆಯಲಿವೆ ಎಂದು ಅವರು ಹೇಳಿದರು.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ನವೀಕರಿಸಬಹುದಾದ ಇಂಧನ ಮೂಲಗಳು, ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಭಗವಂತ್ ಖೂಬಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಂಸದ ಡಾ. ಉಮೇಶ್ ಜಾಧವ್, ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಹಾಗೂ ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಸೇರಿದಂತೆ ಸಂಬಂಧಪಟ್ಟ ಎಲ್ಲ ಮೇಲಾಧಿಕಾರಿಗಳು ಬೇಡಿಕೆಗೆ ಸ್ಪಂದಿಸಬೇಕು ಎಂದು ಅವರು ಮನವಿ ಮಾಡಿದರು.
ಒಂದು ವೇಳೆ ಇದೇ ಜುಲೈ 30ರೊಳಗೆ ಪರಿಗಣಿಸದೇ ಹೋದಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಯ ಕಾರ್ಮಿಕರು ಮುಂತಾದವರು ಸೇರಿ ಆಗಸ್ಟ್ 5ರಿಂದ ಬೇಡಿಕೆ ಈಡೇರುವವರೆಗೂ ಹೋರಾಟ ಆರಂಭಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಪ್ಪ ಜಮಾದಾರ್, ಭೀಮಪ್ಪ ಪಟ್ಟೇದಾರ್, ಎಂ.ಡಿ. ಗೌಸ್, ನಾಮದೇವ್ ರಾಠೋಡ್, ದತ್ತು ಭೋವಿ, ಸುಭಾಷ್ ಭೋವಿ, ತುಕಾರಾಮ್ ಭೋವಿ ಮುಂತಾದವರು ಉಪಸ್ಥಿತರಿದ್ದರು.