ಏಮ್ಸ್‌ ಹೋರಾಟಕ್ಕೆ ಎಲ್‌ಜೆಪಿ ಬೆಂಬಲ

ರಾಯಚೂರು.ಸೆ.16- ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ಸಂಬಂಧ ನಡೆಯುತ್ತಿರುವ ಹೋರಾಟಕ್ಕೆ ಭಾರತೀಯ ಆಹಾರ ನಿಗಮ ಸಲಹಾ ಸಮಿತಿಯ ಸದಸ್ಯ ಹಾಗೂ ಲೋಕಜನಶಕ್ತಿ ಪಾರ್ಟಿಯ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಜಿ.ವೆಂಕಟರೆಡ್ಡಿ ಬೆಂಬಲ ವ್ಯಕ್ತಪಡಿಸಲಿದ್ದಾರೆ.
ಹಾಗೆಯೇ ಲೋಕಜನಶಕ್ತಿ ಪಕ್ಷದ ಸರ್ವ ಸದಸ್ಯರು ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕಾರ ‌ಮತ್ತು ಹೋರಾಟ ಅಗತ್ಯವೆಂದಿದ್ದಾರೆ. ಜಿಲ್ಲೆಯಲ್ಲಿ‌ ದೇಶದ ಅತ್ಯುನ್ನತ ಸಂಸ್ಥೆಯಾಗಿರುವ ಏಮ್ಸ್ ಸ್ಥಾಪನೆ ಮಾಡಬೇಕಾಗಿದೆ. ನಂಜುಂಡಪ್ಪ ವರದಿ ಅನುಸಾರ ಐಐಟಿ ಸ್ಥಾಪನೆಯಾಗಬೇಕಿತ್ತು. ಆದರೆ, ರಾಜಕೀಯ ಹಿತಾಸಕ್ತಿಯಿಂದ ಕೈತಪ್ಪಿದೆ. ಈಗ ಏಮ್ಸ್ ಸ್ಥಾಪಿಸುವ ಕುರಿತಂತೆ ಹಲವು ಸಂಘಟನೆಯ ಮುಖಂಡರು ಹೋರಾಟ ರೂಪಿಸುತ್ತಿದ್ದು, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು. ನಾವು ಹೋರಾಟದ ಭಾಗವಾಗಲಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಸಮತೋಲನೆ ನೀಗಿಸಬೇಕಾದರೆ ರಾಜ್ಯ ಸರ್ಕಾರವು ಕೂಡ ನಮ್ಮ ಜಿಲ್ಲೆಯ ಸಲುವಾಗಿ ಮುತುವರ್ಜಿ ವಹಿಸಬೇಕು. ಕೇಂದ್ರ ಸರ್ಕಾರಕ್ಕೆ ರಾಯಚೂರು ಜಿಲ್ಲೆಯನ್ನು ಮಾತ್ರ ಏಮ್ಸ್ ಸ್ಥಾಪನೆ ಕುರಿತಂತೆ ಪ್ರಸ್ತಾವನೆಯನ್ನು ಸಲ್ಲಿಸುವ ಮೂಲಕ ಜಿಲ್ಲೆಯ ಪರವಾಗಿ ನಿಲ್ಲಬೇಕೆಂದು ಆಗ್ರಹಿಸಿದ್ದಾರೆ.