ಏಪ್ರೀಲ್‍ನಲ್ಲಿ ಒಂದು ದಿನದ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

ಕಲಬುರಗಿ:ಮಾ.25: ಜಿಲ್ಲೆಯಲ್ಲಿ ಸದಾ ಒಂದಿಲ್ಲೊಂದು ಹೊಸತನದಿಂದ ಕೂಡಿದ ಕಾರ್ಯಕ್ರಮಗಳಿಂದ ಹೆಸರು ಮಾಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ಮೊದಲ ಬಾರಿಗೆ ಏಪ್ರೀಲ್‍ನಲ್ಲಿ ಒಂದು ದಿನದ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನವೊಂದನ್ನು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಈ ಕುರಿತು ರವಿವಾರ ನಗರದ ಕನ್ನಡ ಭವನದಲ್ಲಿ ನಡೆಸಿದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತತ್ವಪದಕಾರರು ತಮ್ಮ ದಿನನಿತ್ಯ ಜೀವನದಲ್ಲಿ ಕಂಡ ಅನೇಕ ತರಹದ ನೋವು, ನಲಿವು, ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ತಮ್ಮ ಸಾಹಿತ್ಯದ ಮೂಲಕ ಹೊರಹಾಕಿದ್ದಾರೆ. ತತ್ವಪದಕಾರರ ಅನೇಕ ಚಿಂತನೆಗಳನ್ನು ಇಂದಿನ ಸಮಾಜಕ್ಕೆ ಪರಿಚಯಿಸುವ ಪ್ರಯತ್ನ ಈ ಸಮ್ಮೇಳನದ್ದಾಗಿದೆ.
ಮುಂದಿನ ವಾರದಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಸಮೇಳನವನ್ನು ಅರ್ಥಪೂರ್ಣವಾಗಿಸಲು ಅನೇಕ ಹೊಸತನದ ವಿಚಾರಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ್ ಎಸ್ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾದ್ಯಕ್ಷ ಶರಣರಾಜ್ ಛಪ್ಪರಬಂದಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಸಿದ್ಧಲಿಂಗ ಜಿ ಬಾಳಿ, ಜಗದೀಶ ಮರಪಳ್ಳಿ, ಶ್ರೀಕಾಂತ ಪಾಟೀಲ ತಿಳಗೂಳ, ಶಕುಂತಲಾ ಪಾಟೀಲ ಜಾವಳಿ, ಜ್ಯೋತಿ ಕೋಟನೂರ, ಡಾ. ರೆಹಮಾನ್ ಪಟೇಲ್, ವಿನೋದಕುಮಾರ ಜೇನವೇರಿ, ಶಿವಾನಂದ ಪೂಜಾರಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಶರಣಬಸಪ್ಪ ನರೂಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಕನ್ನಡ ಸಾಹಿತ್ಯಕ್ಕೆ ತತ್ವಪದಕಾರರ ಕೊಡುಗೆ ಅಪಾರವಾಗಿದೆ. ತತ್ವಪದಗಳಲ್ಲಿನ ಉನ್ನತಮಟ್ಟದ ವಿಚಾರಗಳನ್ನು ಈ ಸಮ್ಮೇಳನ ಪ್ರಚುರಪಡಿಸಲಿದೆ. ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈಗಾಗಲೇ ಅನೇಕ ಪ್ರಥಮಗಳಿಗೆ ಸಾಕ್ಷಿಯಾಗಿದೆ. ತತ್ವಪದ ಸಾಹಿತ್ಯ ಸಮ್ಮೇಳನವೂ ಇದರಲ್ಲಿ ಸೇರಲಿದೆ.

ವಿಜಯಕುಮಾರ ತೇಗಲತಿಪ್ಪಿ
ಕಸಾಪ ಜಿಲ್ಲಾಧ್ಯಕ್ಷ