ಏಪ್ರಿಲ್ ಅಂತ್ಯಕ್ಕೆ 24*7 ಕುಡಿಯುವ ನೀರಿನ ಯೋಜನೆ ಪೂರ್ಣ: ಶಾಸಕ ಯತ್ನಾಳ

ವಿಜಯಪುರ, ಎ.4-ಬೇಸಿಗೆ ಕಾರಣದಿಂದಾಗಿ ನೀರು ಪೂರೈಕೆ ಅತ್ಯಂತ ಅಗತ್ಯವಾಗಿದ್ದು 24*7 ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಏಪ್ರಿಲ್ ಅಂತ್ಯದವರೆಗೆ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಗುತ್ತಿಗೆದಾರರಿಗೆ ಶಾಸಕ ಬಸನಗೌಡ ರಾ ಪಾಟೀಲ (ಯತ್ನಾಳ) ಸೂಚನೆ ನೀಡಿದರು.
ನಗರದ ತಮ್ಮ ಸಾರ್ಜನಿಕ ಸಂಪರ್ಕ ಕಾರ್ಯಾಲಯದಲ್ಲಿ ಬೇಸಿಗೆ ನಿಮಿತ್ಯ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರೊಂದಿಗೆ ಸಭೆ ಕರೆದು ಮಾತನಾಡಿದ ಅವರು.
10- 12 ದಿನಗಳವರೆಗೆ ನೀರು ಬಿಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಶೀಘ್ರವಾಗಿ ಬಗೆಹರಿಸಿ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಆಗದಂತೆ 4-5 ದಿನಗಳಿಗೊಮ್ಮೆ ಸರಿಯಾದ ಕ್ರಮದಲ್ಲಿ ನೀರು ಪೂರೈಸಿ. ತೊರವಿ ಎಲ್.ಟಿ. ನಂ 2 ರಲ್ಲಿ ನಿರ್ಮಾಣ ಮಾಡಿದ ಓವರ್ ಹೆಡ್ ಟ್ಯಾಂಕ್‍ಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ, ಶೀಘ್ರವಾಗಿ ನೀರಿನ ಸಂಪರ್ಕ ಕಲ್ಪಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೀರು ಬಿಡುವ ಸಮಯ ನಿಗದಿ ಮಾಡಿ. ಬೆಳಿಗ್ಗೆ ನೀರು ಬಿಟ್ಟರೆ ಸಾರ್ವಜನಿಕರಿಗೆ ಅನುಕೂಲ ರಾತ್ರಿ ಹೊತ್ತು ನೀರು ಬಿಡುವುದು ಬೇಡ, ಪೈಪ್ ಲೈನ್ ಕಾಮಗಾರಿಗಾಗಿ ಅಗೆಯಲಾಗಿದ್ದು. ರಿ-ಕಾರ್ಪೆಟ್ ಮಾಡಿಲ್ಲ ಅವೆಲ್ಲ ರೀ ಕಾರ್ಪೆಟ್ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ತಿಳಿಸಿದರು.
ಜಲಮಂಡಳಿಯಿಂದ ಅಧಿಕೃತ ಕರವಸೂಲಿಗಾರರ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ, ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಿ, ಅನ್ಯ ವ್ಯಕ್ತಿಗಳಿಗೆ ಸಾರ್ವಜನಿಕರು ಕರ ಪಾವತಿಸಿ ಮೋಸ ಹೋಗುವುದನ್ನು ತಪ್ಪಿಸಿ. ಕರ ವಸೂಲಿ ಅಭಿಯಾನ ಪ್ರಾರಂಭಿಸಿ, ಸಾರ್ವಜನಿಕರು ಸಹ ನೀರನ್ನು ಮಿತವಾಗಿ ಬಳಸುವಂತೆ ಜಾಗೃತಿ ಮೂಡಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಅನೇಕ ಕಡೆ ಬೋರ್ವೆಲ್ ಕೊರೆಸಲಾಗಿದ್ದು, ಮೋಟರ್ ಅಳವಡಿಸಿಲ್ಲ ಶೀಘ್ರದಲ್ಲಿ ಈಗಿದ್ದ ಹಾಗೂ ಹೊಸದಾಗಿ ಕೊರೆಸಲಾದ ಬೋರ್ವೆಲ್‍ಗಳಿಗೆ ಮೋಟರ್ ಅಳವಡಿಸಿ, ಅಲ್ಲಲ್ಲಿ ಮಂಡಳಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಿಸಿ ಆಯಾ ಕಾಲನಿಯ ಜನರಿಗೆ ನೀರಿನ ಸೌಲಭ್ಯ ದೊರಕಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ತಿಳಿಸಿದರು.
ಸಭೆಯಲ್ಲಿ ವಿ.ಡಿ.ಎ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಸದಸ್ಯ ವಿಕ್ರಮ ಗಾಯಕವಾಡ, ಜಲಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಪಟ್ಟಣಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ಪಿ ಚೆನ್ನ ಸ್ವಾಮಿ, ಬಿ. ವಾಯ್. ನದಾಫ್, ಜೈನ್ ಇರಿಗೇಶನ್ ಗುತ್ತಿಗೆದಾರರಾದ ದೀಪಕ್ ಪಾಟೀಲ್ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂ ಕರಡಿ ಅಶೋಕ್ ಬೆಲ್ಲದ, ರಾಜೇಶ್ ದೇವಿಗಿರಿ,ರಾಹುಲ್ ಜಾದವ, ಪರಶುರಾಮ್ ರಜಪೂತ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.