ಏಪ್ರಿಲ್‌ನಲ್ಲಿ ಸೋಂಕು ಹೆಚ್ಚಳ

ಬೆಂಗಳೂರು,ಏ.೪- ದೇಶದಲ್ಲಿ ಕೊರೋನಾ ಸೋಂಕು ಸಂಖ್ಯೆ ಹೆಚ್ಚಳವಾಗುತ್ತಿರುವ ನಡುವೆಯೇ ರಾಜ್ಯದಲ್ಲಿಯೂ ಎರಡನೇ ಅಲೆಯ ಸೋಂಕು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದ್ದು ಈ ತಿಂಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಏಪ್ರಿಲ್ ೧೦ ರಿಂದ ೩೦ರ ತನಕ ಕೊರೋನಾ ಸೋಂಕು ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿ ಪೀಕ್ ಹಂತ ತಲುಪಲಿದೆ.ಹೀಗಾಗಿ ಜನರು ಹಿಂದೆಂದಿಗಿಂತ ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಸೂಚಿಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸೋಂಕು ಹೆಚ್ಚಾಗುತ್ತಲೇ ಇದೆ. ಇದರ ಜೊತೆಗೆ ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಮೈಸೂರು.ಕಲಬುರಗಿ, ಬೀದರ್, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೋಂಕು ಪ್ರಮಾಣ ನಿತ್ಯ ಏರಿಕೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜನರು ಕೋವಿಡ್ ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಇಲ್ಲದಿದ್ದರೆ ಅಪಾಯ ಎದುರಿಸಬೇಕಾದೀತು ಎಂದು ಭಾರತೀಯ ವಿಜ್ಞಾನಸಂಸ್ಥೆಯ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ಸೋಂಕು ಕಾಣಿಸಿಕೊಂಡ ಬಳಿಕ ಸೋಂಕು ಸಂಖ್ಯೆ ಏರಿಕೆಯಲ್ಲಿ ಪೀಕ್ ಅವಧಿ ಮುಟ್ಟಿದ ರೀತಿಯಲ್ಲಿಯೇ ಈ ಬಾರಿಯೂ ಸೋಂಕು ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ ಹೀಗಾಗಿ ಎಚ್ಚರಿಕೆ ವಹಿಸಿ ಎಂದು ಅವರು ರಾಜ್ಯದ ಜನರಿಗೆ ಸಲಹೆ ಮಾಡಿದ್ದಾರೆ.
ಸೋಂಕು ಹೆಚ್ಚಳ ತಡೆಯಲು ಜನರು ಸಾಮಾಜಿಕ ಅಂತರಕ್ಕೆ ಒತ್ತು ನೀಡಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕೈಗಳ ಶುಚಿತ್ವಕ್ಕೆ ಒತ್ತು ನೀಡಬೇಕು ಸೇರಿದಂತೆ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಸಲಹೆ ಮಾಡಲಾಗಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಶಶಿಕುಮಾರ್ ಗಣೇಶನ್ ನೇತೃತ್ವದ ತಂಡ ಹಲವು ಅಂಕಿ ಸಂಖ್ಯೆಗಳನ್ನು ಅಧ್ಯಯನ ಮಾಡಿ ಮತ್ತು ಸೋಂಕು ಹೆಚ್ಚಳವಾಗುವ ಕುರಿತು ಮುನ್ಸೂಚನೆ ನೀಡಿದ್ದಾರೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ.ತ್ರಿಲೋಕ್ ಚಂದ್ರ ಅವರು, ರಾಜ್ಯ ತಾಂತ್ರಿಕ ಸಲಹಾ ಮಂಡಳಿಯೂ ಕೂಡ ಸೋಂಕು ಹೆಚ್ಚಳ ಕುರಿತಂತೆ ಮಾಹಿತಿ ನೀಡಿದೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು, ಕೋವಿಡ್ ಸೂಕ್ತ ವರ್ತನೆ ನಿಯಮ ಪಾಲಿಸುವುದರಿಂದ ಸೋಂಕು ಪ್ರಮಾಣ ಅಷ್ಟೇ ಬೇಗ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.