ಕಲಬುರಗಿ,ಮಾ.27: ನಗರದ ನೂತನ ಮಹಾವಿದ್ಯಾಲಯದಲ್ಲಿ ಏಪ್ರಿಲ್ 1ರಿಂದ 30ರವರೆಗೆ ಒಂದು ತಿಂಗಳು ಕಾಲ ಪಿಯುಸಿ ವಿದ್ಯಾರ್ಥಿಳಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಿಇಟಿ, ಎನ್‍ಇಇಟಿ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರಾಧ್ಯಕ್ಷ ಡಾ. ಬಸಂತಗೌಡ ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪ್ರತಿಷ್ಠಿತ ಕಾಲೇಜುಗಳ ನುರಿತ ಉಪನ್ಯಾಸಕರು ಪಾಠ ಮಾಡುವರು. ಉಚಿತ ತರಬೇತಿಯಲ್ಲಿ ಜಿಲ್ಲೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶ ಪಡೆಯಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 7760971182, 6362635244ಗೆ ಸಂಪರ್ಕಿಸಬೇಕು ಎಂದರು.
ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿ ಪರಿಷತ್ ಕಳೆದ ಏಳು ದಶಕಗಳಿಂದ ಸೇವೆ ಸಲ್ಲಿಸುತ್ತಿದೆ. ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ ಎನ್ನುವ ಘೋಷವಾಕ್ಯದೊಂದಿಗೆ ಅನೇಕ ರಚನಾತ್ಮಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಭಕ್ತಿ ಬೆಳೆಸುವುದರೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಕಾರ್ಯನಿರ್ವಹಿಸುತ್ತಿರುವ ಜಗತ್ತಿನ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆ ಎಂದು ಅವರು ಹೇಳಿದರು.
ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೂ ಸಂಘಟನೆ ಹೋರಾಟ ಮಾಡುತ್ತಿದೆ ಹಾಗೂ ಪರಿಹಾರವನ್ನೂ ಸಹ ಕೊಡಿಸುತ್ತಿದೆ. ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದು, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪರಿಹಾರಕ್ಕಾಗಿ ಧುಮುಕುತ್ತಿದೆ. ಅಂತಹ ಕೆಲಸಗಳಲ್ಲಿ ಉಚಿತ ಸಿಇಟಿ ತರಬೇತಿ ಕೂಡ ಒಂದಾಗಿದೆ ಎಂದು ಅವರು ತಿಳಿಸಿದರು.
ಅನೇಕ ವರ್ಷಗಳಿಂದ ರಾಜ್ಯದ ಅನೇಕ ಕಡೆಗಳಲ್ಲಿ ಗುಣಮಟ್ಟದ ತರಬೇತಿಯನ್ನು ನೀಡುತ್ತ ಬರಲಾಗಿದೆ. ಸಿಇಟಿ ಪದವಿ ಪೂರ್ವ ಶಿಕ್ಷಣದ ನಂತರದಲ್ಲಿ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಹೆಬ್ಬಾಗಿಲು ಇದ್ದಂತೆ. ಆದಾಗ್ಯೂ, ದುಬಾರಿ ಶುಲ್ಕ ಕೊಟ್ಟು ಎಲ್ಲರೂ ಕೋಚಿಂಗ್ ಪಡೆಯಲಾಗದು. ಇಂತಹ ಸಂದರ್ಭದಲ್ಲಿ ರಾಜ್ಯದ ಬೇರೆ, ಬೇರೆ ಕಡೆಗಳಲ್ಲಿ ನುರಿತ ಉಪನ್ಯಾಸಕರಿಂದ ಗುಣಮಟ್ಟದ ತರಬೇತಿ ಕೊಡಲಾಗುತ್ತಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ತಾಯಪ್ಪ ಯಾದವ್, ಅಶೋಕ್ ಗುತ್ತೇದಾರ್, ವಿಶ್ವನಾಥ್ ಹುಲಿ, ರವಿ ಕೋಲಕಾರ್ ಮುಂತಾದವರು ಉಪಸ್ಥಿತರಿದ್ದರು.