ಏತ ನೀರಾವರಿ ಹೆಸರಲ್ಲಿ ಜನರಿಗೆ ಮಂಕುಬೂದಿ: ಗೌರಿಶಂಕರ್

ತುಮಕೂರು, ನ. ೧೩- ದೇಶದಲ್ಲಿ ವಿಫಲವಾಗಿರುವ ಏತ ನೀರಾವರಿ ಯೋಜನೆಯನ್ನು ತಂದು ಕ್ಷೇತ್ರದ ಆ ಕೆರೆ, ಈ ಕೆರೆ ತುಂಬಿಸಲಿಲ್ಲ ಎಂದು ಹೇಳುವವರಿಗೆ ಈ ಯೋಜನೆಯ ಸಫಲತೆಯ ಬಗ್ಗೆ ಅರಿವು ಇರಲಿಲ್ಲವೇ, ಏತ ನೀರಾವರಿ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚಲಾಗಿದೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಆರೋಪಿಸಿದರು.
ಗ್ರಾಮಾಂತರ ಕ್ಷೇತ್ರದ ಸಿರಿವರ ಗ್ರಾಮ ಪಂಚಾಯ್ತಿಯಲ್ಲಿ ೧೧ ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಹಾಗೂ ಮಹಿಳೆಯರಿಗೆ ಬಾಗಿನ ವಿತರಿಸಿ ಅವರು ಮಾತನಾಡಿದರು.
ಗೂಳೂರು ಏತ ನೀರಾವರಿ ಮೂಲಕ ಹಂಚಿಕೆಯಾಗಿರುವ ೩೦೦ ಎಂಸಿಎಫ್‌ಟಿ ನೀರನ್ನು ೪೨ ಕೆರೆಗಳಿಗೆ ತುಂಬಿಸಲು ಸಾಧ್ಯವೇ? ಅಕ್ಕಪಕ್ಕದ ತಾಲ್ಲೂಕುಗಳಲ್ಲಿ ಗುರುತ್ವಾಕರ್ಷಣೆಯ ಮೂಲಕ ನೀರನ್ನು ಕೊಂಡ್ಯೊಯ್ದಿದ್ದರೆ, ಇಲ್ಲಿ ಏತ ನೀರಾವರಿಯನ್ನು ಅನುಷ್ಠಾನಗೊಳಿಸಲಾಗಿದೆ, ಗುರುತ್ವಾಕರ್ಷಣೆ ಮೂಲಕ ನೀರನ್ನು ಹರಿಸಿದ್ದರೆ, ಈ ಭಾಗದ ಎಲ್ಲ ಕೆರೆಗಳು ತುಂಬುತ್ತಿದ್ದವು, ಕೊಳವೆ ಬಾವಿಗಳಿಗೂ ನೀರು ಬರುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಗಳಗಕೆರೆಯಿಂದ ಉಪಯೋಗ ಪಡೆಯುತ್ತಿರುವುದು ಗ್ರಾಮಾಂತರ ಕ್ಷೇತ್ರದ ಸಿರಿವರ, ಬೊಮ್ಮನಹಳ್ಳಿ ಸೇರಿದಂತೆ ಅನೇಕ ಹಳ್ಳಿಗಳು, ಕಳೆದ ೩೦ ವರ್ಷಗಳಿಂದ ತುಂಬಿಸಲು ಆಗದ ಕೆರೆಯನ್ನು ಪ್ರಾಮಾಣಿಕ ಪ್ರಯತ್ನದಿಂದ ತುಂಬಿಸಿದ್ದೇನೆ. ಇದರಿಂದಾಗಿ ಈ ಭಾಗದ ೫೦೦ಕ್ಕೂ ಹೆಚ್ಚು ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಲಿದೆ ಎಂದು ಹೇಳಿದರು.
ಕಳೆದ ವರ್ಷ ಇದೇ ಸಂದರ್ಭದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೆ, ಇಂದು ಕಾಮಗಾರಿ ಪೂರ್ಣಗೊಂಡಿದೆ, ಕೊಲ್ಲಾಪುರದಮ್ಮ ದೇಗುಲದ ಗೋಪುರವನ್ನು ಜೀರ್ಣೋದ್ಧಾರವನ್ನು ಮಾಡಿದ್ದೇನೆ, ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ ಎಂದು ಬೊಗಳೆ ಬಿಡುತ್ತಿದ್ದರು, ಕೋಡಿಮುದ್ದನಹಳ್ಳಿಯಲ್ಲಿ ರಸ್ತೆಯೇ ಇರಲಿಲ್ಲ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ೫೦೦ ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಕೋಡಿ ಮುದ್ದನಹಳ್ಳಿಯಲ್ಲಿ ೨೦ ಎಕರೆಯಲ್ಲಿ ೨೨೦ ಕೆವಿ ವಿದ್ಯುತ್ ಸ್ಟೇಷನ್ ನಿರ್ಮಾಣಕ್ಕೆ ಭೂಮಿ ಹಸ್ತಾಂತರಿಸಲಾಗಿದೆ, ಇದು ಮಾಡಿದ್ದು ಸಮ್ಮಿಶ್ರ ಸರ್ಕಾರ, ಕೆಂಬಾಳಲು ಕೆರೆ ತುಂಬಲಾಗುತ್ತಿದೆ ಎಂದರು.
ಪ್ರತಿ ವರ್ಷ ತಾಲ್ಲೂಕಿನ ೪೦ ಸಾವಿರ ಹೆಣ್ಣು ಮಕ್ಕಳಿಗೆ ಬಾಗಿನ ನೀಡುವ ಮೂಲಕ ಬಾಂಧವ್ಯವನ್ನು ಕಾಪಾಡಿಕೊಳ್ಳುತ್ತಿದ್ದೇವೆ. ಗೌರಿಶಂಕರ್ ಶಾಸಕರಾದರೂ ಕೋವಿಡ್ ಬಂದು ಸತ್ತರೆ ಯಾರು ಬರುವಂತಿಲ್ಲ. ರಾಜಕೀಯವನ್ನು ಬಿಟ್ಟು ಪ್ರೀತಿ ವಿಶ್ವಾಸದಿಂದ ಬದುಕೋಣ, ಜೀವನವನ್ನೇ ಮಾಡುವುದಕ್ಕೆ ಆಗುವುದಿಲ್ಲ ಎನ್ನುವ ಪರಿಸ್ಥಿತಿ ಬಂದರೆ ನನ್ನ ಕುಟುಂಬದೊಂದಿಗೆ ಗೌರಿಶಂಕರ್ ಇರುತ್ತಾನೆ ಎಂಬುದನ್ನು ನೆನಪಿಸಿಕೊಳ್ಳಿ ಎಂದರು.
ಗ್ರಾಮಾಂತರ ಕ್ಷೇತ್ರದಲ್ಲಿ ಮೊದಲ ಕಂತಿನಲ್ಲಿ ೩ ಸಾವಿರ ನಿವೇಶನಗಳನ್ನು ಹಂಚಲಾಗುತ್ತಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಪಡಿತರ ಚೀಟಿಯನ್ನು ಹೊಂದಿಲ್ಲದೇ ಇರಬಾರದು ಎಂದ ಅವರು, ಪಿಂಚಣಿ ಹಣ ಬಿಡುಗಡೆಗೆ ತಾಂತ್ರಿಕ ಸಮಸ್ಯೆಯಾಗಿದ್ದು ಎಂಟು ತಿಂಗಳ ಬಾಕಿ ಇದ್ದರು ಪಿಂಚಣಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿರಿವರ ಭಾಗದ ಸುಮಾರು ೨ ಸಾವಿರ ಮಹಿಳೆಯರಿಗೆ ದೀಪಾವಳಿ ಅಂಗವಾಗಿ ಸೀರೆಯನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಗೂಳೂರು, ಹೊಸೂರು, ಮಾನಂಗಿ, ನಂದಿಹಳ್ಳಿ ಸೇರಿದಂತೆ ಗ್ರಾಮಾಂತರ ಕ್ಷೇತ್ರದ ವಿವಿಧೆಡೆ ೨ ಕೋಟಿ ಶಾಸಕರ ಅನುದಾನದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹಾಲನೂರು ಅನಂತಕುಮಾರ್, ತಾ.ಪಂ.ಸದಸ್ಯ ರಂಗಸ್ವಾಮಯ್ಯ, ನಗರಪಾಲಿಕೆ ಸದಸ್ಯ ವೆಂಕಟೇಶ್‌ಗೌಡ, ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಬೆಳಗುಂಬ ವೆಂಕಟೇಶ್, ಕಾರ್ಯಾಧ್ಯಕ್ಷ ಸುರೇಶ್, ಜೆಡಿಎಸ್ ಮುಖಂಡರಾದ ತಿಮ್ಮಪ್ಪಗೌಡ, ಲಾಟರಿ ನಾರಾಯಣಪ್ಪ, ನರುಗನಹಳ್ಳಿ ವಿಜಯಕುಮಾರ್, ನರಸಪ್ಪ, ಪ್ರಕಾಶ್, ಮಹದೇವ್, ಅಬ್ಬಾಸ್, ಬೋರೇಗೌಡ, ಗಂಗಣ್ಣ, ಕೆ.ಬಿ.ರಾಜಣ್ಣ, ಲೋಕೇಶ್, ಶಂಕರಣ್ಣ, ಮುನಿರತ್ನ, ಜಯರಾಂ ಉಪಸ್ಥಿತರಿದ್ದರು.