ಏಡ್ಸ್ ಕುರಿತು ಜಾಗೃತಿ ಜಾಥಾ


ಸಂಜೆವಾಣಿ ವಾರ್ತೆ
ಹೊಸಪೇಟೆ ಡಿ.02: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಹಣಾ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಹೊಸಪೇಟೆ ನಗರದಲ್ಲಿ ಜಾಗೃತಿ ಜಾಥಾ ಮೂಲಕ ಅರಿವು ಮೂಡಿಸಲಾಯಿತು.
ಜಾಗೃತಿ ಜಾಥಾ: ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಜಾಗೃತಿ ಜಾಥಕ್ಕೆ ವಿಜಯನಗರ ಜಿಲ್ಲೆ ಪ್ರಧಾನ ಸಿವಿಲ್ ನ್ಯಾಯಧೀಶರಾದ ಕಿಶನ್ ಬಿ. ಮೂಡಲಗಿ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದಶಕಗಳಿಂದ ಬಾಧಿಸುತ್ತಿರುವ ಹೆಚ್.ಐ.ವಿ/ಏಡ್ಸ್ ಮಹಾಮಾರಿಯ ನಿರ್ಮೂಲನೆಗೆ ಚಿಕಿತ್ಸೆ ಎಂದರೆ ಅರಿವು ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ಎನ್.ಜಿ.ಓ. ಗಳು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತ್ತಿದೆ ಹಾಗೂ ಉತ್ತಮ ಸೇವೆಗಳನ್ನು ನೀಡುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಎಲ್.ಆರ್. ಶಂಕರ್ ನಾಯಕ್ ಅವರು ಮಾತನಾಡಿ, 2023ರ ಘೋಷ ವಾಕ್ಯ “ಸಮುದಾಯಗಳು ಮುನ್ನಡಿಸಲಿ” ಎಂಬುವುದಾಗಿದೆ. ಹೊಸದಾಗಿ ಸೋಂಕಿತರಾದವರಲ್ಲಿ ಹದಿಹರೆಯದವರು ವಿದ್ಯಾರ್ಥಿಗಳು ಇರುವುದು ಆತಂಕಕಾರಿ ವಿಷಯ ಎಂದು ಕಳವಳ ವ್ಯಕ್ತಪಡಿಸಿದರು. ಹದಿಹರಯದವರಿಗೆ ಮತ್ತು ಪೋಷಕರಿಗೆ ಜಾಗೃತರಾಗಬೇಕು. ಸಮುದಾಯಕ್ಕೆ ಅರಿವು ಮೂಡಿಸಿ ಹೆಚ್.ಐ.ವಿ. ಸೋಂಕನ್ನು ಶೂನ್ಯಕ್ಕೆ ತರಲು ಪ್ರಯತ್ನಿಸೋಣ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಜಗದೀಶ್ ಪಾಟ್ಟೆ ಅವರು ಮಾತನಾಡಿ, ಈ ದಿನ ಹೆಚ್.ಐ.ವಿ/ಏಡ್ಸ್ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವುದು ಹಾಗೂ ಸೋಂಕಿಗೆ ಬಲಿಯಾದವರಿಗೆ ಸಂತಾಪ ಸೂಚಿಸುವುದು ಆಗಿರುತ್ತದೆ. ಸೋಂಕಿತರಿಗೆ ದೊರೆಯುವ ಉಚಿತ ಚಿಕಿತ್ಸೆ, ಆರೋಗ್ಯ ಸೌಲಭ್ಯಗಳು, ಎ.ಆರ್.ಟಿ. ಕೇಂದ್ರ, ಐಸಿಟಿಸಿ, ಎಫ್.ಐ.ಸಿ.ಟಿ.ಸಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಜಯನಗರ ವಕೀಲ ಸಂಘದ ಅಧ್ಯಕ್ಷ ಕೆ.ವಿ. ಬಸವರಾಜು, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜಂಬಯ್ಯ, ಡಿ.ಎಲ್.ಓ ಡಾ. ರಾಧಿಕಾ, ಎಫ್.ಡಬ್ಲೂ.ಓ ಡಾ. ವಿನಯ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ| ಭಾಸ್ಕರ್ ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜಾಥವು ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿ ಆವರಣದಿಂದ ಗಾಂಧಿಚೌಕಿ ಸರ್ಕಲ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮಾರ್ಗವಾಗಿ ಸ್ಟೇಷನ್ ರಸ್ತೆಯ ರೋಟರಿಹಾಲ್ ವರೆಗೆ ನಡೆಯಿತು. ಜಾಥದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಶಂಕರ್ ಆನಂದ್‌ ಸಿಂಗ್ ಸರ್ಕಾರಿ ಕಾಲೇಜು ಎನ್.ಎಸ್.ಎಸ್. ವಿದ್ಯಾರ್ಥಿಗಳು, ರೆಡ್ ರಿಬ್ಬನ್ ಕಾಲೇಜು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ವೈಭವ ಹೆಚ್.ಐ.ವಿ ಸೋಂಕಿತರ ಸಂಘ, ಸೌಖ್ಯ ಬೆಳಕು ಸಮುದಾಯ ಸಂಸ್ಥೆ, ವಿಮುಕ್ತಿ ಮಹಿಳಾ ಏಡ್ಸ್ ತಡೆಗಟ್ಟುವ ಸಂಸ್ಥೆ ಹಾಗೂ ವಿವಿಧ ಸಂಘ- ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು, ಪೋಲೀಸ್ ಇಲಾಖೆ ಪಾಲ್ಗೊಂಡು ಯಶಸ್ವಿಗೊಳಿಸಿದರು. 

One attachment • Scanned by Gmail