ಏಕ ಬಳಕೆಯ ಪ್ಲಾಸ್ಟಿಕ್ ವಶಕ್ಕೆ ಪಡೆದ ಪುರಸಭೆ ಅಧಿಕಾರಿಗಳು

ಅಫಜಲಪುರ:ಜು.13: ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪುರಸಭೆಯ ಅಧಿಕಾರಿಗಳು ಪಟ್ಟಣದಲ್ಲಿ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಟ್ಟಣದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿಜಯ ಹೂಗಾರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಇಳಿದು ಅವ್ಯಾಹತವಾಗಿ ನಡೆಯುತ್ತಿರುವ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಕಿರಾಣಿ ಅಂಗಡಿ, ತರಕಾರಿ ಮಾರುಕಟ್ಟೆ, ಹಣ್ಣಿನ ಅಂಗಡಿ, ಬೇಕರಿ, ಹೋಟೆಲ್ ಗಳು, ಚಹಾ ಕ್ಯಾಂಟೀನ್ ಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಬ್ಯಾಗ್, ಚಹಾ ಕಪ್, ನೀರಿನ ಲೋಟಗಳು ಸೇರಿದಂತೆ ಏಕ ಬಳಕೆಯ ಅನೇಕ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದರು.

ಬಳಿಕ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿಗಳು ಸಾರ್ವಜನಿಕರಿಂದ ಅನಧಿಕೃತವಾಗಿ ಪ್ಲಾಸ್ಟಿಕ್ ದಾಸ್ತಾನು ಮತ್ತು ಬಳಕೆ ತಡೆಯಲು ಪ್ಲಾಸ್ಟಿಕ್ ಶೇಖರಣೆ ಮೇಲೆ ದಾಳಿ ನಡೆಸಲು ಸ್ಥಳೀಯ ಸಂಸ್ಥೆಯಿಂದ ತಂಡಗಳನ್ನು ರಚಿಸಲಾಗಿದೆ. ತರಕಾರಿ ಮಾರುಕಟ್ಟೆ, ಸ್ಥಳೀಯ ಸಗಟು ಮಾರುಕಟ್ಟೆಗಳು, ಬೀದಿ ವ್ಯಾಪಾರಿಗಳು, ಹೂ ಮಾರಾಟಗಾರರು, ಬಸ್ ನಿಲ್ದಾಣ, ಸಾರ್ವಜನಿಕ ಮತ್ತು ವಾಣಿಜ್ಯ ಸ್ಥಳಗಳಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲು ಹಾಗೂ ದಂಡ ವಿಧಿಸಲು ಯೋಜನೆ ರೂಪಿಸಿದ್ದು, ಏಕ ಬಳಕೆ ಪ್ಲಾಸ್ಟಿಕ್ ದಾಸ್ತಾನು ಬಳಕೆ ಮಾಡಿದ್ದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಎಸ್.ಐ ಸಂಜಯ್ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.