ಏಕ್ ಲವ್ ಯಾ ಎಣ್ಣೆ ಹಾಡು ಬಿಡುಗಡೆ

* ಚಿ ಗೋ ರಮೇಶ್

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನವ ನಟನ ಆಗಮನಕ್ಕೆ ವೇದಿಕೆ ಸಜ್ಜುಗೊಂಡಿದೆ.  ನಟಿ  ನಿರ್ಮಾಪಕಿ ರಕ್ಷಿತಾ ಪ್ರೇಮ್ ಅವರ ಸಹೋದರ ” ರಾಣಾ” . ಇದೀಗ “ಏಕ್ ಲವ್ ಯಾ” ಚಿತ್ರದ ಮೂಲಕ  ಹೊಸ ಭರವಸೆ ಮೂಡಿಸಲು ಮುಂದಾಗಿದ್ದಾರೆ.

ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಚಿತ್ರೀಕರಣ ಸಂಪೂರ್ಣ ಪೂರ್ಣಗೊಂಡಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಹೊಸವರ್ಷದ ಆರಂಭದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದೆ. ರೀಶ್ಮಾ ನಾಣಯ್ಯ, ಮತ್ತು ರಚಿತಾ ರಾಮ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿಯೂ ರಚಿತಾ ರಾಮ್ ಚಿತ್ರದಿಂದ ಚಿತ್ರಕ್ಕೆ ಗ್ಲಾಮರ್ ಲುಕ್, ಬೊಲ್ಡ್ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ‌. ಈ ಮೂಲಕ ಬರೀ ನಟನೆಯಲ್ಲಿ ಮಾತ್ರ ಅಲ್ಲ ಬಿಂದಾಸ್ ಆಗಿ  ಕಾಣಿಸಿಕೊಳ್ಳುವುದರಲ್ಲಿಯೂ ಪಕ್ವತೆ ಇದೆ ಎಂದು ನಿರೂಪಿಸುತ್ತಿದ್ದಾರೆ.

ಚಿತ್ರದಲ್ಲಿ  ತೆಲುಗು ಚಿತ್ರರಂಗದ ಮಾದಕ ಕಂಠದ ಗಾಯಕಿ ಮಂಗ್ಲಿ  ಆಡಿರುವ ಎಣ್ಣೆ ಹಾಡಿದ್ದು, ಈ ಹಾಡಿನಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ ಜೊತೆಗೆ ನಿರ್ಮಾಪಕರಾಗಿರುವ ರಕ್ಷಿತಾ ಹೆಜ್ಜೆ ಹಾಕಿರುವುದು ಮತ್ತೊಂದು ವಿಶೇಷ.

ಎಣ್ಣೆ ಹಾಡಿನ ಬಿಡುಗಡೆ ಕಾರ್ಯಕ್ರಮವಿತ್ತು. ಇದಕ್ಕಾಗಿ ಗಾಯಕಿ ಮಂಗ್ಲಿ ಹೈದರಾಬಾದ್ ನಿಂದ ಆಗಮಿಸಿದ್ದರು. ಎಣ್ಣೆ ಹಾಡಿನ ಹಿನ್ನೆಲೆಯಲ್ಲಿ ವೇದಿಕೆ ಮೇಲೆ ಇದ್ದ ನಟಿ ರಚಿತಾ ರಾಮ್ ಸೇರಿ ಎಲ್ಲರೂ ಶಾಂಪೇನ್ ಹಾಕಿಕೊಂಡುಕೊಂಡು ಹಾಡು ಸಂಭ್ರಮಿಸಿದರು.

ಈ ವೇಳೆ ಮಾತಿಗಿಳಿದ ನಿರ್ಮಾಪಕಿ ರಕ್ಷಿತಾ ಪ್ರೇಮ್, ಸಹೋದರನ್ನು ಚಿತ್ರರಂಗಕ್ಕೆ ನಾಯಕನಟನಾಗಿ ಪರಿಚಯ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಚಿತ್ರದ ನಿರ್ಮಾಣದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ.ಪತಿ ಪ್ರೇಮ್, ನಿರ್ದೇಶಕರಾಗಿದ್ದರೂ ಚಿತ್ರಕ್ಕೆ ಏನೆಲ್ಲಾ ಬೇಕೋ ಅದನ್ನು ನೀಡಲಾಗಿದೆ.ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ಅವರದು.

ನಿರ್ದೇಶಕ ಪ್ರೇಮ್ ಒಂದಕ್ಕಿಂತ ಒಂದು ಹಾಡುಗಳು ಭಿನ್ನವಾಗಿದೆ ಬಂದಿದೆ. ಗಾಯಕಿ ಮಂಗ್ಲಿ ಹಾಡಿರುವ ಹಾಡು ಹಿಟ್ ಆಗುವುದರಲ್ಲಿ ಅನುಮಾನವಿಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಾಯಕ ರಾಣಾ, ನಿರ್ದೇಶಕರು ಹೇಳಿದ ಕೆಲಸವನ್ನು ಚಾಚೂತಪ್ಪದೆ ಪಾಲಿಸಿದ್ದೇನೆ ಮೊದಲ ಚಿತ್ರ ಎಲ್ಲರ ಸಹಕಾರ ಇರಲಿ ಎಂದು ಹೇಳಿದರೆ ರೀಶ್ಮಾ ನಾಣಯ್ಯ, ಮೊದಲ ಬಾರಿಗೆ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು.

ನಟಿ ರಚಿತಾ ರಾಮ್ ಚಿತ್ರದಲ್ಲಿ ಗೋಲ್ಡ್ ಮತ್ತು ಡೈನಾಮಿಕ್ ಪಾತ್ರ ಇದೆ ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಿ ಎಂದು ಕುತೂಹಲ ಕಾಪಾಡಿಕೊಂಡರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಪ್ರೀತಿ ಸೆಂಟಿಮೆಂಟ್ ಸೇರಿದಂತೆ ಎಲ್ಲಾ ಜಾಮರ್  ನಲ್ಲಿ ಹಾಡುಗಳು ಮೂಡಿಬಂದಿವೆ ಜನರಿಗೆ ಇಷ್ಟವಾಗಲಿದೆ ಎಂದರು. ಗಾಯಕಿ ಮಂಗ್ಲಿ, ರಾಬರ್ಟ್ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಅವಕಾಶ ಸಿಗುತ್ತಿವೆ ಎಂದರು. ಚಿತ್ರಕ್ಕೆ ಮಹೇಂದ್ರಸಿಂಹ ಕ್ಯಾಮರಾ ಕೆಲಸವಿದೆ.

ಕ್ಷಮೆ ಕೋರಿದ ತಂಡ

ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರದ ಮುಂದೆ ಶಾಂಪೇನ್ ಓಪನ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಿರ್ದೇಶಕ ಪ್ರೇಮ್ ನಿರ್ಮಾಪಕಿ ರಕ್ಷಿತಾ ರಚಿತಾರಾಮ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.

ಪುನೀತ್ ರಾಜಕುಮಾರ್ ಅವರ ಮೇಲೆ ಅಪಾರವಾದ ಗೌರವ ಇದೆ. ಅಚಾನಕ್ ಆಗಿ ಆದ ಘಟನೆ ಪುನೀತ್ ಅವರಿಗೆ ಅವಮಾನ ಮಾಡುವ ಯಾವುದೇ ಉದ್ದೇಶ ಚಿತ್ರತಂಡಕ್ಕೆ ಇಲ್ಲ. ಹೀಗಿದ್ದರೂ ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುವುದಾಗಿ ಚಿತ್ರತಂಡ ಹೇಳಿದೆ.