ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಜಾರಿಗೆ ಕ್ರಮ

ಕೋಲಾರ,ನ.೨೧: ರೈತರ ಆಧಾಯ ದ್ವಿಗುಣಗೊಳಿಸುವ ರಾಜ್ಯ ಸರ್ಕಾರದ ಉದ್ದೇಶಿತ ‘ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಎಫ್‌ಆರ್‍ಯುಐಟಿಎಸ್) ಜಾರಿಯಿಂದಾಗಿ ರೈತರು ಸಾಲ ಪಡೆಯಲು ಮಾರ್ಟ್‌ಗೇಜ್‌ಗಾಗಿ, ಇಸಿ, ನಿರಾಪೇಕ್ಷಣಾ ಪತ್ರಕ್ಕಾಗಿ ಅಲೆಯುವುದು ತಪ್ಪಲಿದ್ದು, ಬ್ಯಾಂಕಿನಲ್ಲೇ ಎಲ್ಲಾ ಸೌಲಭ್ಯಗಳು ಸಿಗಲಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೊಸೈಟಿಗಳ ಗಣಕೀಕರಣದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈ ನೋಂದಣಿ ವ್ಯವಸ್ಥೆಯನ್ನು ರೈತಸ್ನೇಹಿಯಾಗಿ ಶೀಘ್ರ ಅನುಷ್ಟಾನಗೊಳಿಸುವುದಾಗಿ ತಿಳಿಸಿದರು.
‘ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಪೋರ್ಟಲ್‌ನಲ್ಲಿ ರೈತರು ನೋಂದಾಯಿಸಿದಲ್ಲಿ ಸರ್ಕಾರದ ಭೂಮಿ ಸಾಫ್ಟ್‌ವೇರ್ ಲಿಂಕ್ ಹೊಂದಿರುವ ಈ ವ್ಯವಸ್ಥೆಯಲ್ಲಿ ರೈತರ ವೈಯಕ್ತಿಕ ಮಾಹಿತಿ, ಜಮೀನಿನ ಮಾಹಿತಿ,ದಾಖಲೆ, ಬೆಳೆ ಮಾಹಿತಿ ಮತ್ತಿತರ ಎಲ್ಲಾ ದಾಖಲೆಗಳು ಲಭ್ಯವಾಗಲಿವೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಈ ವ್ಯವಸ್ಥೆಯನ್ನು ರಾಜ್ಯದಲ್ಲೇ ಮೊದಲ ಬಾರಿಗೆ ತನ್ನಲ್ಲಿ ಅಳವಡಿಸಿಕೊಳ್ಳಲು ನಿಧರಿಸಿದ್ದು, ಈ ವ್ಯವಸ್ಥೆಯಿಂದಾಗಿ ರೈತರು ಸಾಲಕ್ಕಾಗಿ ಮಾರ್ಟ್‌ಗೇಜ್,ಇಸಿ ಪಡೆಯಲು ಉಪನೋಂದಾಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಲಿದೆ, ಬ್ಯಾಂಕಿನಲ್ಲೇ ಈ ಎಲ್ಲಾ ದಾಖಲೆಗಳು ಉಚಿತವಾಗಿ ರೈತರಿಗೆ ಸಿಗಲಿದ್ದು, ರೈತರು ಸಾಲ ಪಡೆಯುವುದು ಸುಲಭವಾಗಲಿದೆ ಮತ್ತು ಸುಳ್ಳು ದಾಖಲೆ ನೀಡಿ ಸಾಲ ಪಡೆಯುವ ಪ್ರಯತ್ನಗಳು ತಪ್ಪಲಿದ್ದು, ಪಾರದರ್ಶಕ ವ್ಯವಸ್ಥೆ ಜಾರಿಯಾಗಲಿದೆ ಎಂದರು.
ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವ ಸರ್ಕಾರದ ಈ ಕ್ರಮದಡಿ ರೈತರು ‘ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಎಫ್‌ಆರ್‍ಯುಐಟಿಎಸ್) ಕರ್ನಾಟಕ ಪೊ?ರ್ಟಲ್ ನೋಂದಣಿ ಮತ್ತು ಲಾಗಿನ್ ಮಾಡಿಕೊಳ್ಳಬಹುದಾಗಿದ್ದು, ಇದರಿಂದ ಕೃಷಿ ಚಟುವಟಿಕೆಗಳಿಗೆ ಸುಲಭವಾಗಿ ಸಾಲ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ಯಾಂಕ್ ಹಾಗೂ ಸೊಸೈಟಿಗಳ ಗಣಕೀಕರಣ ಅಳವಡಿಕೆಯನ್ನು ಮತ್ತಷ್ಟು ಉನ್ನತಿಕರಿಸುವ ಕುರಿತು ಟಿಸಿಎಸ್ ಸಂಸ್ಥೆ ಇಂಜಿನೀಯರ್ ಜೋಷಿ ಅವರಿಗೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲು ಸೂಚಿಸಿದರು.
ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕ ಕೆ.ವಿ.ದಯಾನಂದ್, ಎಜಿಎಂಗಳಾದ ಶಿವಕುಮಾರ್, ಬೈರೇಗೌಡ, ಖಲೀಮುಲ್ಲಾ, ಹುಸೇನ್ ದೊಡ್ಡಮನಿ, ನಾಗೇಶ್, ಶುಭಾ, ಯಲ್ಲಪ್ಪರೆಡ್ಡಿ, ಅಂಬರೀಷ್, ಬೇಬಿ ಶಾಮಿಲಿ, ಮಂಗಳಗೌರಮ್ಮ, ಅಮ್ಜದ್‌ಖಾನ್, ನವೀನ್, ಮಂಗಳ, ಸೌಮ್ಯ, ಮಮತಾ, ಶೃತಿ, ಅಶ್ವಿನಿ, ಶೈಲಜ ಮತ್ತಿತರರಿದ್ದರು.