ಏಕೀಕರಣದ ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ: ಯರಗುಪ್ಪಿ

ನವಲಗುಂದ,ನ1 : ಕರ್ನಾಟಕ ಏಕೀಕರಣವಾಗಲು ಕನ್ನಡದ ಕುಲ ಪುರೋಹಿತ ಆಲೂರು ವೆಂಕಟರಾಯರು, ಚಿಂತಕರು, ಸಾಹಿತಿಗಳು, ಚಲನಚಿತ್ರ ನಟರು ಸೇರಿದಂತೆ ಸಾಕಷ್ಟು ಮಹನೀಯರು ಹೋರಾಟಗಳನ್ನು ಮಾಡಿ ಕರ್ನಾಟಕ ರಾಜ್ಯ ಉದಯಿಸಲು ಕಾರಣಿಕರ್ತರಾಗಿದ್ದಾರೆ, ಅವರ ತ್ಯಾಗವನ್ನು ನಾವು ಸ್ಮರಿಸಬೇಕೆಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-3 ರಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಕನ್ನಡ ಭಾಷೆಗೆ ಸಾವಿರಾರು ವರ್ಷದ ಇತಿಹಾಸವಿದೆ, ಕನ್ನಡ ಭಾಷೆಗೆ ತನ್ನದೇ ಆದಂತಹ ಪುರಾತನತೆ ಪ್ರಾದೇಶಿಕ ಹಾಗೂ ಸಾಹಿತ್ಯಕ ಸನಾತನತೆ ಇದೆ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಮ್ಮ ನಾಡಿನ ಮಹನೀಯರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡುವುದರ ಮೂಲಕ ಗೌರವ ಸಲ್ಲಿಸುತ್ತಿದೆ ಎಂದರು.
ನಿವೃತ್ತ ಶಿಕ್ಷಕ ಎನ್.ಎನ್.ಹಾಲಿಗೇರಿ ಮಾತನಾಡಿ ಶಿಲ್ಪಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನ ಎಲ್ಲವನ್ನೂ ಜಗತ್ತಿಗೆ ನೀಡಿದ ಕೀರ್ತಿ ಕನ್ನಡ ನಾಡಿಗೆ ಸಲ್ಲುತ್ತದೆ,ಅನೇಕ ಮಹಾನ್ ಸಂತರು, ಶರಣರು ನಡೆದಾಡಿ ಹೋದಂತಹ ಪುಣ್ಯ ಭೂಮಿ ಇದಾಗಿದ್ದು, ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದ ಕೀರ್ತಿ ನಮ್ಮ ಕನ್ನಡ ಭಾಷೆಗಿದೆ, ನಾವು ನೀವೆಲ್ಲ ಭಾಗ್ಯಶಾಲಿಗಳು ಹಾಗಾಗಿ ಈ ಪವಿತ್ರ ನಾಡಿನಲ್ಲಿ ಜನಿಸಿದ್ದೇವೆ, ಉಸಿರು ಇರುವರೆಗೂ ಕನ್ನಡವೇ ನಮ್ಮ ಉಸಿರಾಗಲಿ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಎಸ್.ಎಸ್.ಜೋಶಿ, ಎಸ್.ಎಮ್. ಬೆಂಚಿಕೇರಿ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಅಡಿವೆಪ್ಪ ಶಿರಸಂಗಿ, ಎಸ್.ಡಿ.ಎಂ.ಸಿ ಅಧ್ಯಕ್ಷ ವೀರಣ್ಣ ಶಿರೋಳ, ಉಪಾಧ್ಯಕ್ಷ ರಜಿಯಾಬೇಗಂ ಕೊಪ್ಪಳ, ಸದಸ್ಯರಾದ ಮಹಮ್ಮದ ತಾಜುದ್ದೀನ ಹುನಗುಂದ, ಮುತ್ತಪ್ಪ ಬಿಸನಾಳ, ಮಹಾದೇವಪ್ಪ ಹಂಡಿ, ಫಕೀರಸಾಬ ನದಾಫ, ಮಹಿಳಾ ಸದಸ್ಯಣಿಯರಾದ ಅನ್ನಪೂರ್ಣ ದೊಡ್ಡಮನಿ, ಶೈನಾಜಬೇಗಂ ನರಗುಂದ, ಶೈಲಾ ದುತಾರಿ, ಲತಾ ಪುಗಶೆಟ್ಟಿ, ಬಸಮ್ಮ ಚಿಕ್ಕಣ್ಣವರ ಸಹ ಶಿಕ್ಷಕರಾದ ಆರ್.ಬಿ.ಹಳ್ಳಿಕೇರಿ, ಟಿ.ಎಪ್.ಮರೆಪ್ಪಗೌಡ್ರ, ಎಂ.ಸಿ.ಚನ್ನಪ್ಪಗೌಡ್ರ, ಶಿವಯೋಗಿ ಜಂಗಣ್ಣವರ, ಎ.ಎಸ್.ಹುಂಡೆಕಾರ, ಕೆ.ಎಚ್.ಕರೆಭರಮಣ್ಣವರ,ಕೆ.ಕೆ.ಮಂಕಣಿ, ಕೆ.ಎಫ್.ಬಂಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.