ಏಕಾಗ್ರತೆಯಿಂದೆ ಓದು ಸುಲಲಿತ: ಡಾ. ಸಿ ಆರ್ ಚಂದ್ರಶೇಖರ

ಕಲಬುರಗಿ:ಸೆ.16:ಮನುಷ್ಯನ ಜೀವನದಲ್ಲಿ ಮನೋವಿಜ್ಞಾನದ ತಿಳಿವಳಿಕೆ ಮೂಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಮನಸ್ಸು ನಮ್ಮ ಹಿಡಿತದಲ್ಲಿದ್ದರೆ ಪ್ರತಿಯೊಬ್ಬರೂ ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ ಎಂದು ಮನೋವಿಜ್ಞಾನಿ, ಲೇಖಕ ಡಾ.ಸಿ.ಆರ್.ಚಂದ್ರಶೇಖರ ಹೇಳಿದರು.
ಶುಕ್ರವಾರ ಆಳಂದ ಪಟ್ಟಣದ ಹೊರವಲಯದ ಜಗದ್ಗುರು ತೋಂಟದಾರ್ಯ ಅನುಭವ ಮಂಟಪದಲ್ಲಿ ಎಸ್ ಆರ್ ಜಿ ಫೌಂಡೇಶನ, ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ, ವಿಕಾಸ ಅಕಾಡೆಮಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದರು.
ಶೃದ್ಧೆ, ಏಕಾಗೃತೆಯಿಂದೆ ಓದು ಸುಲಲಿತವಾಗುತ್ತದೆ ಆದ್ದರಿಂದ ಮಕ್ಕಳನ್ನು ದುಶ್ಚಟ, ದುರ್ಗುಣಗಳಿಗೆ ಮಾರು ಹೋಗದಂತೆ ತಯಾರು ಮಾಡುವುದು ಪಾಲಕರ ಮತ್ತು ಶಿಕ್ಷಕರ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
ಮನಸ್ಸು ನಮ್ಮ ಎಲ್ಲ ಕಾರ್ಯಗಳ ಬಹುಮುಖ್ಯ ಅಂಶವಾಗಿದೆ ಆ ಮನಸ್ಸನ್ನು ಸೂಪ್ತವಾಗಿಡಲು ದೈಹಿಕ ಮಾನಸಿಕ ಆರೋಗ್ಯದ ಜೊತೆಗೆ ಕ್ರಿಯಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳುವುಂತೆ ಪ್ರೇರಣೆ ನೀಡಬೇಕಾಗಿದೆ ಎಂದು ನುಡಿದರು.
ಸರ್ವ ಸಮಸ್ಯೆಗಳಿಗೆ ಕಾರಣವಾಗುವ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದನ್ನು ಎಲ್ಲರೂ ಅರಿತಿರಬೇಕು. ಮನೆಯಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ದುರ್ನಡತೆ, ಅತಿಯಾದ ಹಠ, ಅನವಶ್ಯಕ ಜಿದ್ದು ಮಾಡಿದಾಗ ಮಾನಸಿಕವಾಗಿ, ಪ್ರೀತಿಯಿಂದ ತಿದ್ದಿ ಸಮಾಧಾನದಿಂದ ಮಾತನಾಡುವ ಮೂಲಕ ಅವರಲ್ಲಿ ಅರಿವು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.
ಇಂದು ಯುವಜನಾಂಗ ಬಹುತೇಕ ಖಿನ್ನತೆಯಿಂದ ಬಳಲುತ್ತಿದೆ. ಅವರಿಗೆ ಸೂಕ್ತ ತಿಳುವಳಿಕೆ ನೀಡುವ ಅವಶ್ಯಕತೆಯಿದೆ. ಧ್ಯಾನದಿಂದ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಇದರಿಂದ ಚಂಚಲವಾದ ಮನಸ್ಸು ಏಕಾಗ್ರಗೊಳ್ಳುತ್ತದೆ ಎಂದು ಸಲಹೆ ನೀಡಿದರು.
ಕೇವಲ ಪಾಶ್ಚಿಮಾತ್ಯ ಸಿದ್ಧಾಂತಗಳನ್ನು ಅಭ್ಯಾಸ ಮಾಡಿದರೆ ಸಾಲದು. ಸ್ಥಳೀಯ ಪರಿಸರಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುವುದು ಬಹಳ ಮುಖ್ಯವಾಗಿದೆ. ಭಾರತದಲ್ಲಿ ಕ್ಲಿನಿಕಲ್, ಕೌನ್ಸಲಿಂಗ್, ಶಾಲಾ ಮನೋವಿಜ್ಞಾನ ಮತ್ತು ಕ್ರೀಡಾ ಮನೋವಿಜ್ಞಾನಕ್ಕೆ ಸಾಕಷ್ಟು ಅವಕಾಶಗಳಿವೆ. ಯುವ ಜನಾಂಗ ಸಾಮಾಜಿಕ ಸಂಸ್ಕøತಿಗೆ ಅನುಗುಣವಾಗಿ ಮನೋವಿಜ್ಞಾನವನ್ನು ಬೆಳೆಸಲು ಶ್ರಮಿಸಬೇಕಿದೆ ಎಂದು ಅವರು ಆಶಿಸಿದರು.
ವೇದಿಕೆಯ ಮೇಲೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ ಎಸ್ ದೇಸಾಯಿ, ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ, ಪ್ರಾಚಾರ್ಯರಾದ ಡಾ. ಅಪ್ಪಾಸಾಬ ಬಿರಾದಾರ, ಮಲ್ಲಿಕಾರ್ಜುನ ಬುಕ್ಕೆ, ರಾಜೇಂದ್ರ ಭಾವಿ, ಮುಖ್ಯ ಗುರು ಮಲ್ಲಿನಾಥ ತುಕ್ಕಾಣೆ, ಉಪನ್ಯಾಸಕ ನಾಗೇಂದ್ರ ಚಿಕ್ಕಳ್ಳಿ, ಸಹಶಿಕ್ಷಕಿ ವಿನುತಾ ಕಡಪಾ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.