ಕಲಬುರಗಿ:ಜೂ.21:ಮನಸ್ಸಿನ ಏಕಾಗ್ರತೆಗೆ ಯೋಗ, ಧ್ಯಾನ ಬೇಕು ಎಂದು ಪ್ರಾಂಶುಪಾಲ ಡಾ. ಸತೀಶಕುಮಾರ.ಎಚ್.ಪಾಟೀಲ್ ಹೇಳಿದರು.
ಅವರು ಜೇವರ್ಗಿ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಒಂಬತ್ತನೇ ಅಂತರಾಷ್ಟ್ರೀಯ ಯೋಗ ದಿನಾಚಾರಣೆಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಯೋಗದ ಕುರಿತು ವಿಶೇಷ ಉಪನ್ಯಾಸ ನೀಡಿ, ಮಾತನಾಡಿದ ಅವರು ಸಮಚಿತ್ತ ಸಾಧಿಸಲು ಯೋಗ ಅಗತ್ಯ ಯೋಗಾಭ್ಯಾಸದಿಂದ ಮನಸ್ಸು ಪರಿಶುದ್ಧವಾಗುತ್ತದೆ, ದೇಹ ಸದೃಢವಾಗುತ್ತದೆ. ಪ್ರತಿಯೊಬ್ಬರು ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಯೋಗ ನಮ್ಮ ಜೀವನ ಶೈಲಿಯಾಗಬೇಕು ಎಂದು ಹೇಳಿದರು. ಉಪನ್ಯಾಸಕರಾದ ಡಾ. ಸೂರ್ಯಕಾಂತ ಕುಲಕರ್ಣಿ ಮಾತನಾಡಿ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಯು ಶಾರೀರಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ, ಆಧ್ಯಾತ್ಮಿಕವೆಂಬ ಪಂಚ ಆಯಾಮಗಳಲ್ಲಿ ಆಗಬೇಕು. ದುಡಿದು ಬದುಕುವ ಸಾಮಥ್ರ್ಯ, ಕೌಶಲ, ಇಚ್ಛಾಶಕ್ತಿ, ಚಾಕಚಕ್ಯತೆ, ನೈತಿಕ ಬಲ ಪಡೆದುಕೊಳ್ಳಲು ಯೋಗಶಿಕ್ಷಣ ಸಹಕಾರಿ. ಯೋಗದ ಮೂಲಕ ದೈಹಿಕ ಹಾಗೂ ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯ ನಿತ್ಯವೂ ಯೋಗಭ್ಯಾಸ ಮಾಡುವುದರಿಂದ ನೈತಿಕ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಆದರ್ಶ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಸಕಾರಾತ್ಮಕ ಮನಸ್ಸಿನ ಆರೋಗ್ಯವಂತ ವ್ಯಕ್ತಿಯು ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಬಲ್ಲ. ಯೋಗ ಇಂದಿನ ಅಗತ್ಯಗಳಲ್ಲಿ ಒಂದು. ಆಧುನಿಕ ಜೀವನಶೈಲಿಯಿಂದಾಗಿ ಒತ್ತಡ, ಖಿನ್ನತೆ, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಅಷ್ಟಾಂಗ ಯೋಗಗಳು ಸಹಕಾರಿ ಎಂದು ಹೇಳಿದರು. ಉಪನ್ಯಾಸಕರಾದ ದೇವಿಂದ್ರಪ್ಪ ವಿಶ್ವಕರ್ಮ ಮಾತನಾಡಿ ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲು ಉನ್ನತ ಜೀವನ ಶಿಕ್ಷಣವೇ ಯೋಗ. ಯೋಗ ಆರೋಗ್ಯ ವರ್ಧಕ ಹಾಗೂ ರೋಗ ನಿವಾರಕ, ಯಾವುದೇ ವೃತ್ತಿ-ಪ್ರವೃತ್ತಿಯಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಮಾಜಸೇವೆ ಎಲ್ಲರ ಹೊಣೆಗಾರಿಕೆಯಾಗಿದೆ. ಮೋಕ್ಷವೇ ಬದುಕಿನ ಅಂತಿಮ ಗುರಿಯಾಗಿದ್ದು, ಪ್ರತಿಯೊಬ್ಬರೂ ತಮಗೆ ಸಿಕ್ಕಿದ ಅವಕಾಶದ ಸದುಪಯೋಗ ಮಾಡಿ ಸರ್ವರ ಹಿತಕ್ಕಾಗಿ ನಗುಮೊಗದಿಂದ ನಿಸ್ವಾರ್ಥ ಸೇವೆ ಮಾಡಬೇಕು. ಇಂದಿನ ಯಾಂತ್ರಿಕ ಬದುಕಿನಲ್ಲಿ ದೇಹಕ್ಕೆ ಅಗತ್ಯ ವ್ಯಾಯಾಮ ಸಿಗದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಇದಕ್ಕೆ ಪ್ರತಿದಿನ ಯೋಗ ಮಾಡುವುದೇ ಪರಿಹಾರವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಂಥಪಾಲಕರಾದ ಸಿದ್ದಣ್ಣ ಹತಗುಂದಿ, ಉಪನ್ಯಾಸಕಿಯರಾದ ಕಾವೇರಿ ಘಾಟೆ, ಕವಿತಾದೇವಿ ಹೀರೇಮಠ ಆದರ್ಶ ಪ್ರಶಿಕ್ಷಣಾರ್ಥಿಗಳಾದ ರಾಜಶ್ರೀ ಬಿರಾದಾರ, ಆಶಾ ಎಮ್, ಭಾಗ್ಯಶ್ರೀ, ಅಶ್ವಿನಿ, ತಾಯಮ್ಮ, ಭವಾನಿ, ರೇಣುಕಾ, ಶರಣಗೌಡ, ಶಿವರಾಜ್, ರೇಣುಕಪ್ಪ, ಸಚೀನ, ಮಹಾಂತೇಶ ಮುಂತಾದವರು ಹಾಜರಿದ್ದರು.