ಏಕಾಏಕಿ ಮುಚ್ಚಿದ ರಂಗಮಂದಿರ: ಯೋಗಪಟುಗಳಿಗೆ ತೀವ್ರ ತೊಂದರೆ

ಬ್ಯಾಡಗಿ,ಮಾ 25: ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣದ ಬಯಲು ರಂಗಮಂದಿರದ ಬಾಗಿಲನ್ನು ಏಕಾಏಕಿ ಮುಚ್ಚಿರುವುದರಿಂದ ಯೋಗ ಪಟುಗಳಿಗೆ ತೀವ್ರ ತೊಂದರೆಯಾಗಿದೆ ಎಂದು ರಾಜ್ಯ ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಘಟಕದ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಟ್ಟಣದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಜಿ ಸೈನಿಕರೊಬ್ಬರು ಕ್ರೀಡಾಂಗಣದಲ್ಲಿರುವ ಬಯಲು ರಂಗಮಂದಿರದಲ್ಲಿ ಪ್ರತಿದಿನ ಬೆಳಿಗ್ಗೆ ಉಚಿತವಾಗಿ ಯೋಗವನ್ನು ಕಲಿಸಿ ಕೊಡುತ್ತಿದ್ದರು. ಇದನ್ನು ತಡೆಗಟ್ಟುವ ದುರುದ್ದೇಶದಿಂದ ಬಯಲು ರಂಗಮಂದಿರದ ಕಳೆದ 10 ದಿನಗಳಿಂದ ಬಾಗಿಲನ್ನು ಮುಚ್ಚಲಾಗಿದೆಯೇ..ಎಂಬ ಸಂದೇಹ ಬರುತ್ತಿದೆ ಎಂದು ತಿಳಿಸಿದ್ದು, ಈ ಕುರಿತು ಹಾವೇರಿಯ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಿಸಿದಾಗ ಬಯಲು ರಂಗಮಂದಿರದ ಕಾಮಗಾರಿ ಪೂರ್ಣಗೊಂಡ ನಂತರ ಈವರೆಗೂ ತಮ್ಮ ಇಲಾಖೆಗೆ ಇದನ್ನು ಹಸ್ತಾಂತರ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಕಾಮಗಾರಿಯನ್ನು ಪೂರ್ಣಗೊಳಿಸಿರುವ ನಿರ್ಮಿತಿ ಕೇಂದ್ರ ಕಳೆದ 2018ರ ಮಾರ್ಚ 8ರಂದು ತಮ್ಮ ಇಲಾಖೆಯಿಂದ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಬರೆದಿರುವ ಹಸ್ತಾಂತರ ಪತ್ರವನ್ನು ನೀಡಿರುವ ಬಗ್ಗೆ ತಿಳಿಸಿದ್ದಾರೆ.

ಅಧಿಕಾರಿಯ ಗೊಂದಲದ ಹೇಳಿಕೆ..!!
ಬಯಲು ರಂಗಮಂದಿರದ ಬಾಗಿಲು ಮುಚ್ಚಿರುವ ವಿಷಯದಲ್ಲಿ ಅನಗತ್ಯ ಗೊಂದಲವನ್ನು ಸೃಷ್ಟಿಸುತ್ತಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಾಲೂಕಾ ಕ್ರೀಡಾಂಗಣದಲ್ಲಿರುವ ಬಯಲು ರಂಗಮಂದಿರವನ್ನು ಒಂದು ವೇಳೆ ಹಸ್ತಾಂತರ ಮಾಡಿಕೊಂಡಿಲ್ಲ ಅಂದರೆ, ಈ ಕ್ರೀಡಾಂಗಣದಲ್ಲಿ ರಂಗಮಂದಿರವನ್ನು ಬಳಸಿಕೊಂಡು ಕಳೆದ 2018ರಿಂದ ನಡೆಸಲಾಗಿರುವ ಕಾರ್ಯಕ್ರಮಗಳ ಬಾಡಿಗೆಯನ್ನು ಪಡೆದುಕೊಂಡಿದ್ದು, ಯಾವ ಆಧಾರದ ಮೇಲೆ ಎಂಬ ಪ್ರಶ್ನೆಯೂ ಕಾಡುವಂತಾಗಿದೆ. ಸಾರ್ವಜನಿಕರಿಗೆ ಉಚಿತವಾಗಿ ಯೋಗಾಭ್ಯಾಸವನ್ನು ನೀಡುತ್ತಿರುವುದನ್ನು ತಪ್ಪಿಸುವ ದುರುದ್ದೇಶದಿಂದ ಕೆಲವು ಕಾಣದ ಕೈಗಳು ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು ಸಂಚು ರೂಪಿಸಿದ್ದರೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾವು ಹೋರಾಟವನ್ನು ನಡೆಸುವುದಾಗಿ ಈ ಸಂದರ್ಭದಲ್ಲಿ ಮಲ್ಲೇಶಪ್ಪ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.